ಬೇಥಾನ್ಯದ ಮರಿಯಳು

 ಬೇಥಾನ್ಯದ ಮರಿಯಳು

 ಅತ್ಯುತ್ತಮವಾದದ್ದನ್ನು ಆರಿಸಿಕೊಳ್ಳಲು ಒಳದೃಷ್ಟಿ ಹೊಂದಿದ್ದ ಸ್ತ್ರೀ

ಲಾಜರನ ಸಹೋದರಿ 👉ಬೇಥಾನ್ಯದ ಮರಿಯಾಳ ವಿಶೇಷ ಗುಣಗಳು

1. ಸ್ವಾಮಿಯ ಪಾದಗಳ ಬಳಿ ವಾಕ್ಯ ಕೇಳುವವಳು ಲೂಕ : 10:38-42

2. ಯೇಸುವಿಗೆ ಪ್ರಿಯ ಶಿಷ್ಯಳು ಯೋಹಾನ : 11:1, ಯೋಹಾನ : 11

3. ಯೇಸುವಿನ ತಲೆಗೆ ತೈಲ ಹಚ್ಚಿದವಳು ಮತ್ತಾಯ :26:7-13, ಮಾರ್ಕ : 14:3-9,ಯೋಹಾನ  11:2,12:3 


        ಬೇಥಾನ್ಯ ಎಂದರೆ  "ಅಂಜೂರದ ಮನೆ" ಅಥವಾ “ದುಃಖದ ಮನೆ “ಎಂದು  ಸತ್ಯವೇದ ವಿದ್ವಾಂಸರು ಹೇಳುವುದುಂಟು , ಏಕೆಂದರೆ ಈ ಪ್ರದೇಶದಲ್ಲಿ ಅನೇಕ ಅಂಜೂರದ ಮರಗಳು ಮತ್ತು ಎಲೆಗಳು  ಇವೆ; ಹಾಗೂ  ಬೆಥನಿಯು ರೋಗಿಗಳಿಗೆ ಮತ್ತು ಸಾಂಕ್ರಾಮಿಕ ರೋಗಗಳಿರುವವ ಜನರಿದ್ದದರಿಂದ ಈ ಹೆಸರು ಬಂದಿರಬಹುದು ಎಂದು ಊಹಿಸುತ್ತಾರೆ.


* ಯೆಹೋವನು ತನ್ನ ಸದ್ಯಕ್ಷರಿಗೆ ಆಪ್ತ ಮಿತ್ರನಂತಿರುವನು ಅವರಿಗೆ ತನ್ನ ಒಡಂಬಡಿಕೆಯ ಅನುಭವವನ್ನು ದಯಪಾಲಿಸುವನು"


[ಯೋಹಾನ 12:1-11 ಪಸ್ಯಹಬ್ಬವು ಇನ್ನು ಆರು ದಿವಸ ಮುಂದೆ ಇರಲಾಗಿ ಯೇಸು ಬೇಥಾನ್ಯಕ್ಕೆ ಬಂದನು. ಯೇಸುವು ಸತ್ತವರೊಳಗಿಂದ ಎಬ್ಬಿಸಿದ ಲಾಜರನು ಅಲ್ಲಿದ್ದು, ಯೇಸುವಿಗೆ ಅಲ್ಲಿ ಔತಣವರಾಡಿಸಲು ವರಾರ್ಥಳು ನೆರವಾಗಿದ್ದಳು; ಲಾಜರನು ಆತನ ಸ೦ಗಡ ಊಟಕ್ಕೆ ಕೂತವರಲ್ಲಿ ಒಬ್ಬನು. ಆಗ ಮರಿಯಳು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲವನ್ನು ಒಂದು ಸೇರಷ್ಟು ತಂದು ಯೇಸುವಿನ ಪಾದಕ್ಕೆ ಹಚ್ಚಿ ತನ್ನ ತಲೆಕೂದಲಿನಿಂದ ಆತನ ಪಾದಗಳನ್ನು ಒರಸಿದಳು. ಆ ತೈಲದ ಪರಿಮಳವು ಮನೆ ಯಲ್ಲೆಲ್ಲಾ ತುಂಬಿಕೊಂಡಿತು. ಆದರೆ ಆತನ ಶಿಷ್ಯರಲ್ಲಿ ಒಬ್ಬನು ಅಂದರೆ ಆತನನ್ನು ಹಿಡುಕೊಡುವದಕ್ಕಿದ್ದ ಇಸ್ಕರಿಯೋತ ಯೂದನೆಂಬುವನು--ಯಾಕೆ ಈ ತೈಲವನ್ನು ಮುನ್ನೂರು ಹಣಕ್ಕೆ ಮಾರಿ ಬಡವರಿಗೆ ಕೊಡಲಿಲ್ಲ ಅಂದನು. ಅವನು ಬಡವರಿ ಗೋಸ್ಕರ ಚಿಂತಿಸಿ ಇದನ್ನು ಹೇಳಲಿಲ್ಲ; ಅವನು ಕಳ್ಳನಾಗಿದ್ದು ತನ್ನ ವಶದಲ್ಲಿದ್ದ ಅವರ ಹಣದ ಚೀಲದಲ್ಲಿ ಹಾಕಿದ್ದನ್ನು ತಕ್ಕೊಳ್ಳುವವನಾಗಿದ್ದರಿಂದಲೇ ಹೇಳಿದನು. ಆಗ ಯೇಸು-- ಈಕೆಯನ್ನು ಬಿಡು; ನನ್ನನ್ನು ಹೊಣಿಡುವ ದಿವಸಕ್ಕಾಗಿ ಅದನ್ನು ಇಟ್ಟು ಕೊಳ್ಳಲಿ, ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ, ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲ ಅಂದನು.


ಯೆಹೂದ್ಯರ ಜನಸಮೂಹವು ಆತನು ಅಲ್ಲಿ ಇದ್ದಾನೆಂದು ತಿಳಿದು ಯೇಸುವನ್ನು ನೋಡುವುದಕ್ಕಾಗಿ ಮಾತ್ರವಲ್ಲದೆ ಆತನು ಸತ್ತವರೊಳಗಿಂದ ಎಬ್ಬಿಸಿದ ಲಾಜರನನ್ನು ಸಹ ನೋಡಬೇಕೆಂಬುದಾಗಿ ಬಂದರು. ಆದರೆ ಮಹಾಯಾಜಕರು ರಾಜರನನ್ನೂ ಕೊಲ್ಲಬೇಕೆಂದು ಆಲೋಚಿಸಿದರು. ಯಾಕೆಂದರೆ ಅವನ ದೆಸೆಯಿಂದ ಯೆಹೂದ್ಯರಲ್ಲಿ ಅನೇಕರು ಹೋಗಿ ಯೇಸುವನ್ನು ನಂಬುವವರಾದರು.]


     1. ಸ್ವಾಮಿಯ ಪಾದಗಳ ಬಳಿ ವಾಕ್ಯ ಕೇಳುವವಳು ಲೂಕ : 10:38-42

    ಪ್ರಿಯ ದೇವಜನರೇ ಈ ಮೇಲಿನ ವಾಕ್ಯಗಳನ್ನು ಧ್ಯಾನಿಸಿದ ನಂತರ ಮರಿಯಳ ಜೀವಿತದ ಆತ್ಮಿಕ ಸತ್ಯ ಸಂಗತಿಗಳನ್ನು ಅಧ್ಯಯನಮಾಡುವದಾದರೆ ಈ ಘಟನೆಯಲ್ಲಿ ಮರಿಯಳು  ಕೋಣೆಯನ್ನು ಪ್ರವೇಶಿಸಿದಳು.ಒಳಗೆ  ಹೋದಳು. ಯಾರಿಗೂ ತಿಳಿಯದಂತೆ ಒಳಗೆ ಕುಳಿತಿದ್ದ ಜನರನ್ನು ಒಮ್ಮೆ ದೃಷ್ಟಿಸಿನೋಡಿದಳು. ಅತಿಥಿಯಾಗಿ ಬಂದಿದ್ದ ಯೇಸುವಿನ ಪಾದ ಸನ್ನಿಧಿಯಲ್ಲಿ ಕುಳಿತುಕೊಂಡಳು: ತನ್ನ ಉದ್ದವಾದ ನಿಲುವಂಗಿಯನ್ನು ಸರಿಪಡಿಸಿಕೊಂಡಳು. ಆಕೆಯ ಆಗಮನದಿಂದ ಅತಿಥಿಗಳ ಮಾತುಕತೆಗೆ ಯಾವ ಅಡ್ಡಿಯೂ ಆಗಲಿಲ್ಲ. ಪುರುಷರ ಧ್ವನಿಯು ಎಂದಿನಂತೆ ಕೋಣೆಯನ್ನು ಆವರಿಸಿಕೊಂಡಿತ್ತು. ಆಕೆಯಂತೂ ಯೇಸುವಿನ ಪಾದಸನ್ನಿಧಿಯಲ್ಲಿ ಕುಳಿತುಕೊಳ್ಳುವುದನ್ನು ಅಭ್ಯಾಸಮಾಡಿಕೊಂಡಿದ್ದಳು, ಇದನ್ನು ಅಲ್ಲಿದ್ದ ಜನರೆಲ್ಲರೂ ಕಂಡಿದ್ದರು (ಲೂಕ10:39)

ಅವರೆಲ್ಲರೂ ಊಟಮಾಡುತ್ತಾ ಮಾತಾಡುತ್ತಿರಲು, ಮರಿಯಳಿಗೆ ಹಿಂದಿನ ದಿನಗಳ ನೆನಪಾಯಿತು. ಯೇಸುಸ್ವಾಮಿ ತನ್ನ ಶಿಷ್ಯರೊಡನೆ, ಮೊದಲನೆ ಸಲ ತಮ್ಮ ಮನೆಗೆ ಬಂದ ದಿನವು ಆಕೆಯಲ್ಲಿ ಮರುಕಳಿಸಿತು. ಆತನು ಅಂದೇ ಅವಳ ಆತ್ಮಿಕ ಜೀವನದೊಳಗೆ ಪ್ರವೇಶಿಸಿದ್ದನು; ತನ್ನಿಂದ ಮಾತ್ರ ಮಾಡಲು ಸಾಧ್ಯವಾದ ಪರಿವರ್ತನೆಯನ್ನು ಸ್ವಾಮಿಯು ಆಕೆಯ ಜೀವಿತದಲ್ಲಿ ಮಾಡಿದ್ದನು. ಈಗ ಆಕೆಯಲ್ಲಿ ಹಿಂದಿನ ಜೀವಿತವನ್ನು ಗುರುತು ಹಿಡಿಯಲೂ ಸಾಧ್ಯವಿರಲಿಲ್ಲ. ಆ ಪರಿವರ್ತನೆಯನ್ನು ಮಾಡಲು ಆತನು ಸ್ನೇಹಭಾವದೊಡನೆ ಆರಂಭಿಸಿದನು ಎಂದು ಆಕೆ ಅಂದುಕೊಂಡಳು. ಅದೊಂದು ಅಪೂರ್ವ ಅನುಭವವಾಗಿತ್ತು. ಅದುವರೆಗೆ ಗಂಡಸರು ಹೆಂಗಸರು ಎಂಬ ಭೇದ ಭಾವವಿತ್ತು. ಪ್ರತಿ ಮುಂಜಾನೆ ಯೆಹೂದಿ ಗಂಡಸರು ಪ್ರಾರ್ಥಿಸುವಾಗಲೆಲ್ಲಾ, "ನನ್ನನ್ನು ಗುಲಾಮನಾಗಿ, ಅನ್ಯನಾಗಿ ಮತ್ತು ಸ್ತ್ರೀಯನ್ನಾಗಿ ಸೃಷ್ಟಿಸದಿದ್ದಕ್ಕಾಗಿ ನಿನಗೆ ಸ್ತುತಿ ಸ್ತೋತ್ರ ಸಲ್ಲಿಸುತ್ತೇನೆ" ಎಂದು ಹೇಳುತ್ತಿದ್ದರು.


ಆದರೆ ಯೇಸು ಆ ಪುರುಷರಂತೆ ವರ್ತಿಸಲಿಲ್ಲ. ಸ್ತ್ರೀ ಪುರುಷರೆಂಬ ಭೇದಭಾವವು ಆತನಿಗಿರಲಿಲ್ಲ. ಆತನಿಗೆ ಸ್ತ್ರೀಪುರುಷರಿಬ್ಬರೂ ಸರಿಸಮಾನವಾಗಿದ್ದರು. ಆತನು ಇಡೀ ಮಾನವಕುಲದ ಬಗ್ಗೆ ಆಸಕ್ತಿ ಹೊಂದಿದ್ದನು (ಗಲಾತ್ಯ 3:28). 

ಸ್ತ್ರೀಯರಿಗೆ ದೊರೆಯಬೇಕಾದ ಗೌರವವನ್ನು ಆತನು ಹೊಸದಾಗಿ ಪರಿಚಯಿಸಿದನು. ಅದುವರೆಗೂ ಇಲ್ಲದ ಅವಕಾಶಗಳನ್ನು ಅವಳಿಗೆ ಕೊಟ್ಟನು. ತನ್ನ ಯೋಜನೆಗಳನುಸಾರವಾಗಿ ಅವಳಿಗೆ ಸ್ಥಾನಮಾನವನ್ನು ಕೊಟ್ಟನು. ಆದಕಾರಣ ಆತನ ಪಾದಸನ್ನಿಧಿಯಲ್ಲಿ ಆಕೆ ಸಂಪೂರ್ಣ ಸಂತೋಷವಾಗಿದ್ದಳು. ಆತನ ಬೋಧನೆಯನ್ನು ಕೇಳುತ್ತಿದ್ದ ಪುರುಷರ ಮಧ್ಯೆ ಕುಳಿತುಕೊಳ್ಳುವುದಕ್ಕೆ ಆಕೆ ಯಾವ ಸಂಕೋಚಪಡಲಿಲ್ಲ.


ಅವಳು ದೇವರವಾಕ್ಯಕ್ಕಾಗಿ ಹಸಿದು ಬಾಯಾರಿದ್ದಳು. ಆದ್ದರಿಂದಲೇ ಆಕೆ ಆತನ ಪಾದಸನ್ನಿಧಿಯಲ್ಲಿ ಕುಳಿತುಕೊಂಡು ಬೋಧನೆಯನ್ನು ಕೇಳುತ್ತಿದ್ದಳು. ಆತನ ಮಾತುಗಳಿಂದ ತನ್ನ ಜೀವಿತದ ಉದ್ದೇಶವನ್ನು ಸ್ಪಷ್ಟವಾಗಿ ಕಂಡುಕೊಂಡಳು. "ನಾನು ದೇವರಿಗೋಸ್ಕರ ಸೃಷ್ಟಿಸಲ್ಪಟ್ಟಿದ್ದೇನೆ ಮತ್ತು ನಾನು ದೇವರಿಗೋಸ್ಕರ ಜೀವಿಸುತ್ತೇನೆ ” ಎಂಬ ದೃಢನಿರ್ಧಾರ ಆಕೆಯಲ್ಲಿ ಬೆಳೆದಿತ್ತು (ಪ್ರಕಟನೆ 4:11)


ಇದು ಅವಳ ಜೀವನಕ್ಕೆ ನಿಜವಾದ ಅರ್ಥವನ್ನೂ ಮೆರಗನ್ನೂ ನೀಡಿತು. ಆಕೆ ಹಿಂದೆಂದೂ ನೆನಸದ ಅವಕಾಶಗಳನ್ನು ತೋರಿಸಿಕೊಟ್ಟಿತು. ಅವಳು ಕ್ರಿಸ್ತನ ಅನ್ನೋನ್ಯತೆಯಲ್ಲಿ ಜೀವಿಸಿದಳು. (1ರಿಂಥ 1:9). ತನ್ನ ಜೀವಿತದ ಉದ್ದೇಶ ಇದೇ ಎಂಬುದು ಆಕೆಗೆ ಖಚಿತವಾಯಿತು. ಅದರ ಮೊದಲನೆಯ ಪರಿಣಾಮವಾಗಿ ಆಕೆ ದೇವರ ವಾಕ್ಯಕ್ಕಾಗಿ ಹಸಿವೆಯಿಂದ ಕುಳಿತಳು . ಮಾನವದೇಹಕ್ಕೆ ಆಹಾರ ಬೇಕು, ಆದರೆ ಆಹಾರವೊಂದೇ ಮಾನವನನ್ನು ತೃಪ್ತಿಪಡಿಸಲಾರದು. ಮಾನವನ ಅಂತರಾತ್ಮವು ದೇವರ ವಾಕ್ಯದಿಂದ ಪೋಷಿಸಲ್ಪಡಬೇಕು (ಮತ್ತಾಯ 4:4).ಎಂಬುದನ್ನು ಆಕೆ ಅರಿತಳು . 


ಅವಳು ಯೇಸುವಿನ ಬೋಧನೆಯಿಂದ ತನ್ನ ಬಾಯಾರಿಕೆಯನ್ನು ನೀಗಿಸಿ ಕೊಳ್ಳತೊಡಗಿದಳು. ಆತನ ಬಗ್ಗೆ ಅವಳಿಗಿದ್ದ ಜ್ಞಾನವು ವೃದ್ಧಿಯಾಗತೊಡಗಿತು. ಅವಳ ಭಾವನೆಗಳು ಪರಿಪಕ್ವವಾದವು. ಆದ್ದರಿಂದಲೇ, ""ನಾನು ಆತನಿಗೋಸ್ಕರವಾಗಿ ನನ್ನಿಂದ ಸಾಧ್ಯವಾದದ್ದನ್ನೆಲ್ಲಾ ಮಾಡುತ್ತೇನೆ" ಎಂಬ ತೀರ್ಮಾನವನ್ನು ಆಕೆ ಕೈ ಕೊಂಡಳು . ಅವಳ ಹೃದಯದಲ್ಲಿ ಕೃತಜ್ಞತೆಯು ತುಂಬಿ ಹೊರಸೂಸಿತು, ದೀರ್ಘವಾಗಿ ಮಾತಾಡುತ್ತಿದ್ದ ಪುರುಷರನ್ನು ಗಮನಿಸಿದಳು. ಬಳಿಕ ಪ್ರಭುವಿಗಾಗಿ ಮತ್ತು ಅತಿಥಿಗಳಿ ಗಾಗಿ ಕಾಯುತ್ತಿದ್ದ ಮಾರ್ಥಳು ಆಕೆಯ ಗಮನವನ್ನು ಸೆಳೆದಳು, ಪಾರ್ಥಳೇ, ಆತನು ನಿನಗಾಗಿ ಎಷ್ಟೊಂದು ಮಾಡಿದ್ದಾನೆ! ಬಹು ಹೆಚ್ಚಾಗಿ ಮಾಡಿದ್ದಾನೆ” ಎಂದು ಮರಿಯಳು ಆಲೋಚಿಸಿದಳು. ಮಾರ್ಥಳು ಕ್ರಿಯಾಶೀಲವ್ಯಕ್ತಿಯಾಗಿದ್ದಳು ಮತ್ತು ಚಟುವಟಿಕೆಯುಳ್ಳವಳಾಗಿದ್ದಳು. ಕರ್ತನ ಮೇಲಿದ್ದ ಆಕೆಯ ಪ್ರೀತಿ ಆತನಿಗಾಗಿ ಆಕೆ ಮಾಡುತ್ತಿದ್ದ ಸೇವೆಯಲ್ಲಿ ಎದ್ದು ಕಾಣುತ್ತಿತ್ತು. ಆಕೆ ಶೀಘ್ರವಾಗಿ ಯೋಚಿಸಿ ಕಾರ್ಯೋನ್ಮುಖಳಾಗುತ್ತಿದ್ದಳು. ಅವಳು ಸ್ವಭಾವದಲ್ಲಿ ಮರಿಯಳಿಗೆ ತದ್ವಿರುದ್ಧ ವಾಗಿದ್ದಳು. ಮರಿಯಳು ಆತ್ಮಪರೀಕ್ಷಕಳಾಗಿದ್ದಳು; ಮೌನವಾಗಿ ಇರುತ್ತಿದ್ದಳು. ಕರ್ತನು ಅವರಿಬ್ಬರನ್ನು ಅರ್ಥಮಾಡಿಕೊಂಡಿದ್ದನು. ಅವರವರ ಗುಣಗಳಿಗೆ ತಕ್ಕಂತೆ ಆತನು ಅವರನ್ನು ಪ್ರೀತಿಸುತ್ತಿದ್ದನು.2. ಯೇಸುವಿಗೆ ಪ್ರಿಯ ಶಿಷ್ಯಳು ಯೋಹಾನ : 11:1, ಯೋಹಾನ : 11

ಮರಿಯಳು ಲಾಜರನ ಕಡೆ ನೋಡಿದಳು, ಆತಿಥೇಯನಾದ ಲಾಜರನು ಯೇಸುವಿನ ಪಕ್ಕದಲ್ಲಿ ಕುಳಿತುಕೊಂಡಿದ್ದನು. ಸತ್ತವರೊಳಗಿಂದ ಎದ್ದು ಬಂದಿದ್ದ ತನ್ನ ತಮ್ಮನನ್ನು ಕಂಡು ಆಕೆಗೆ ಸಂಭ್ರಮವಾಯಿತು. “ಲಾಜರನೇ ಹೊರಗೆ ಬಾ!” ಎಂದು ಯೇಸು ಮಹಾಧ್ವನಿಯಿಂದ ಕೂಗಿದ್ದನ್ನು ತಾನು ಸಾಯುವ ತನಕ ಆಕೆಗೆ ಮರೆಯಲಾಗಲಿಲ್ಲ .


ಆ ಸಂದರ್ಭವನ್ನು ನೆನಸಿಕೊಂಡಾಗ ಆಕೆಯ ಹೃದಯದಲ್ಲಿ ನಾಚಿಕೆಯಾಗುತ್ತಿತ್ತು. ಯಾಕೆಂದರೆ ಕರ್ತನು ಸ್ವಲ್ಪ ಮುಂಚಿತವಾಗಿ ಬರಬಾರದಾಗಿತ್ತೇ ಎಂದು ಆಕೆ ಮತ್ತು ಪಾರ್ಥಳು ಆಶ್ಚರ್ಯಗೊಂಡಿದ್ದರು. ಆತನು ಯಾಕೆ ತಡಮಾಡಿದನು ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಾಗಲಿಲ್ಲ. ತಮ್ಮ ಸಹೋದರನ ಸಾವಿಗಿಂತಲೂ ಯೇಸು ಬರದೇ ಹೋದದ್ದು ಹೆಚ್ಚು ದುಃಖವನ್ನುಂಟುಮಾಡಿತು. ತಮ್ಮ ಜೀವಿತದಲ್ಲಿ ಅವರು ಹಿಂದೆಂದೂ ಈ ರೀತಿಯ ಅನುಭವವನ್ನು ಹೊಂದಿರಲಿಲ್ಲ. ಅವರ ಸಮೀಪದೃಷ್ಟಿಇದರಲ್ಲಿ ತೋರಿಬರುತ್ತದೆ. ಕ್ರಿಸ್ತನು ಯಾಕೆ ತಡಮಾಡಿದನು ಎಂಬುದನ್ನು ಆ ಕೂಡಲೇ ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಲಾಜರನ ಪುನರುತ್ಥಾನದಿಂದ ದೇವರಿಗೆ ಮಹಿಮೆಯಾಗಬೇಕೆಂಬ ಒಂದೇ ಒಂದು ಉದ್ದೇಶದಿಂದ ಯೇಸು ತಡಮಾಡಿದನು. ಇದು ಪರಲೋಕದಲ್ಲಿರುವ ಆತನ ತಂದೆಯ ಉದ್ದೇಶವಾಗಿತ್ತು. ಲಾಜರನ ಈ ಘಟನೆ ಯಿಂದ ಅನೇಕರು ಯೇಸುಸ್ವಾಮಿಯನ್ನು ನಂಬಿದರು.


ದೇವರನ್ನು ಘನಪಡಿಸುವುದು ಮತ್ತು ಜನರಿಗೆ ರಕ್ಷಣೆ ಕೊಡುವುದು ಯೇಸು ಸ್ವಾಮಿಯ ಉದ್ದೇಶವಾಗಿದೆ. ಆದರೆ ಈ ಉದ್ದೇಶವನ್ನು ಈಡೇರಿಸುವುದು ಕಷ್ಟಕರವಾಗಿತ್ತು. ಯಾಕೆಂದರೆ ಯೆಹೂದಿ ನಾಯಕರ ದ್ವೇಷವೆಂಬ ಬೆಂಕಿ ಧಗಧಗಿಸುತ್ತಿತ್ತು. ಲಾಜರನನ್ನು ಮರಣದಿಂದ ಎಬ್ಬಿಸಿದ್ದು , ಆತನು ಲೋಕಕ್ಕಾಗಿ ಹೊಂದುವ ಮರಣವನ್ನು ಸೂಚಿಸಿತು.


ಪಸ್ಯಹಬ್ಬಕ್ಕೆ ಇನ್ನು ಕೇವಲ ಆರುದಿನಗಳಿದ್ದವು.


ಈ ಆಲೋಚನೆಯು ಅವಳ ಕಣ್ಣುಗಳನ್ನು ತೆರಸಿತೇ? ಇಂದು ಯೇಸು ಬಂದಿರುವುದು ತಮ್ಮನ್ನು ಬೀಳ್ಕೊಡುವದಕ್ಕಾಗಿ ಎಂಬ ಆಲೋಚನೆಯು ಆಕೆಯಲ್ಲಿ ಮೂಡಿ ಬಂದಿತೇ? ಆತನು ಸಹ ಪಸ್ಯಹಬ್ಬಕ್ಕಾಗಿ ಸಿದ್ಧವಾಗುತ್ತಿದ್ದನು. ಈ ಹಬ್ಬದಲ್ಲಿ ಜನರ ಪಾಪಪರಿಹಾರ್ಥವಾಗಿ ಪಶುಗಳ ರಕ್ತವನ್ನು ದೇವಾಲಯದಲ್ಲಿ ಸುರಿಸಲಾಗುತ್ತಿತ್ತು. ಅವುಗಳನ್ನು ಯಜ್ಞವನ್ನಾಗಿ ಅರ್ಪಿಸಲಾಗುತ್ತಿತ್ತು (ವಿಮೋಚನಾಕಾಂಡ 12:13, 21–28). ಆದರೆ ಈ ಸಲ ಜೆರುಸಲೇಮಿನಲ್ಲಿ ಪಶುಗಳಿಗಿಂತಲೂ ಅತ್ಯಂತ ಶ್ರೇಷ್ಟವಾದ ಯಜ್ಞವೊಂದನ್ನು ಅರ್ಪಿಸಬೇಕಾಗಿತ್ತು . ಯೇಸುಸ್ವಾಮಿಯ ಕೂಜೆಯ ಮರಣವೇ ಆ ಶ್ರೇಷ್ಠ  ಯಜ್ಞ,


ಯೇಸುಸ್ವಾಮಿ ತನಗೆ ಬರಲಿರುವ ಕಷ್ಟಗಳ ಬಗ್ಗೆ ಹೇಳುತ್ತಿದ್ದುದನ್ನು ಅವಳು ಜ್ಞಾಪಿಸಿಕೊಂಡಳು. (ಮಾರ್ಕ 8:31), ಆತನ ಮೇಲೆ ಅನೇಕ ಯೆಹೂದಿ ನಾಯಕರಿಗೆ ದ್ವೇಷ ಕುದಿಯುತ್ತಿದೆ. ಎಂಬುದು ಆಕೆಗೆ ತಿಳಿದಿತ್ತು. ಯಾವ ಪ್ರಶ್ನೆಯೂ  ಆಕೆಯಲ್ಲಿ ಉಳಿಯಲಿಲ್ಲ. ಯೇಸುವು ಸಾಯಲೇಬೇಕಾಗುತ್ತದೆ. ಆತನು ದೇಶಕ್ಕೆ ಮಾತ್ರವಲ್ಲ, ಇಡೀ ಲೋಕದ ಪಾಪನಿವಾರಣೆಗೆ ನೇಮಿತವಾದ ದೇವರ ಕುರಿಮರಿಯಾಗಿದ್ದನು. ಆತನ ಸ್ನೇಹ ಮತ್ತು ಬೋಧನೆಗಳಿಂದ ಆಕೆಗೆ ಇದೆಲ್ಲಾ ದಿನದಿನಕ್ಕೂ ಸ್ಪಷ್ಟವಾಗತೊಡಗಿತು. ಬೇರೆಯವರಲ್ಲಿಲ್ಲದ ಆತ್ಮಿಕ ಒಳದೃಷ್ಟಿಯನ್ನು ಮತ್ತು ತಿಳಿವಳಿಕೆಯನ್ನು ಆಕೆ ಪಡೆದುಕೊಂಡಿದ್ದಳು (ಯೋಹಾನ 1:29).


3. ಯೇಸುವಿನ ತಲೆಗೆ ತೈಲ ಹಚ್ಚಿದವಳು ಮತ್ತಾಯ :26:7-13, ಮಾರ್ಕ : 14:3-9,ಯೋಹಾನ  11:2,12:3 

    ದೇವರ ವಾಕ್ಯದ ಪ್ರಕಾರ, ನಂಬಿಕೆ ಮತ್ತು ಕ್ರಿಯೆ ಒಟ್ಟಿಗೆ ಇರುತ್ತವೆ. ಮರಿಯಳ ಅಂತರಾಳದಲ್ಲಿ ಈ ಬಯಕೆ ಉಂಟಾಯಿತು. ತಾನು ಕರ್ತನಿಗಾಗಿ ಏನಾದರೂ ಮಾಡ ಬೇಕೆಂಬ ಉತ್ಕಟ ಆಸೆ ಅವಳಿಗಿತ್ತು. ಕರ್ತನಿಗೆ ತನ್ನ ಕೃತಜ್ಞತೆಯನ್ನು ಅರ್ಪಿಸಲು ಆಕೆ ಬಯಸಿದಳು. ಒಂದು ವೇಳೆ ಅದೇ ಕಡೆಯ ಅವಕಾಶವೆಂದು ಆಕೆಗೆ ಅನ್ನಿಸಿರಬಹುದು. ಅವಳು ತನ್ನ ಕೈಗಳನ್ನು ಸರಿಸಿದಳು; ಅಡಗಿಸಿಟ್ಟಿದ್ದ ಸುಗಂಧ ಭರಣಿಯನ್ನು ಮುಟ್ಟಿದಳು. ಆಕೆ ಅಂತಿಮ ತೀರ್ಮಾನವನ್ನು ಕೈಗೊಂಡಿದ್ದಳು.


ಸುಗಂಧದ್ರವ್ಯಕ್ಕೆ ಬಹು ಬೆಲೆಯಿತ್ತು. ಆ ಭರಣಿಯಲ್ಲಿದ್ದ ಸುಗಂದ ದ್ರವ್ಯವನ್ನು ಖರೀದಿಮಾಡಬೇಕಾದರೆ, ಒಬ್ಬ ವ್ಯಕ್ತಿಯ ಒಂದು ವರ್ಷದ ಸಂಬಳವು ಬೇಕಾಗುತ್ತಿತ್ತು (ಮತ್ತಾಯ 20:2). ಅದನ್ನು ನಾರ್ಡ್‌ರದ ಎಣ್ಣೆಯಿಂದ ತಯಾರಿಸಲಾಗಿತ್ತು. ಇದನ್ನು ಶವಸಂಸ್ಕಾರಕ್ಕೆ ಉಪಯೋಗಿಸುತ್ತಾರಲ್ಲವೇ ಎಂಬ ಯೋಚನೆಯು ಆಕೆಯಲ್ಲಿ ಮೂಡಿಬಂತು. ಕೂಡಲೇ ಆಕೆಯು ಆ ಯೋಚನೆಯನ್ನು ಅದುಮಿಟ್ಟಳು. ತಾನು ಆರಾಧಿಸಬೇಕಾಗಿರುವುದು ಶವವನ್ನಲ್ಲ. ಜೀವಸ್ವರೂಪನಾದ ಕರ್ತನನ್ನು ಎಂದು ಕೊಂಡಳು. ಕರ್ತನಿಗೆ ಕೃತಜ್ಞತೆ ಸೂಚಿಸಲು ಇದೇ ಸಮಯವೆಂದು ಭಾವಿಸಿದಳು.


ತನಗೆ ಯಾರಾದರೂ ಅಡ್ಡಿ ಮಾಡುವರೋ ಮತ್ತು ತನಗೆ ಇನ್ನು ಸಮಯವಿಲ್ಲವೋ ಎಂಬಂತೆ ಆಕೆಯು ಈ ಕಾರ್ಯವನ್ನು ಮಾಡಿದಳು.


ಯೇಸುವಿನ ಪಾದಗಳ ಮೇಲೆ ಬೀಳುತ್ತಿದ್ದ ಆ ಸುಗಂಧದ್ರವ್ಯದ ತೊಟ್ಟುಗಳು ಅವಳ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದವು. ಅವಳು ತನ್ನ ಹೃದಯವನ್ನೇ ಪೂರ್ತಿಯಾಗಿ ಸುರಿದುಬಿಟ್ಟಳು. ಈ ಅಂತಿಮ ಕ್ರಿಯೆಯಲ್ಲಿ ಮಾತುಗಳಿರಲಿಲ್ಲ. ಕೇವಲ ಮಾತುಗಳು ಅವಳ ಅನೇಕ ಆಲೋಚನೆಗಳನ್ನು ಹೇಗೆ ತಾನೆ ವ್ಯಕ್ತಪಡಿಸಬಲ್ಲವು?


ಕೆಲವೊಮ್ಮೆ ಆಳವಾದ ಭಾವನೆಗಳನ್ನು ದೃಷ್ಟಿಯಿಂದಾಗಲಿ ಸಂಜ್ಞೆಯಿಂದಾಗಲೀ ತಿಳಿಸುವುದು ಸುಲಭ.


ಕರ್ತನ ಬಗ್ಗೆ ಧ್ಯಾನಿಸುತ್ತಾ ಆಕೆ ಪರಿಸರವನ್ನೇ ಮರೆತುಬಿಟ್ಟಳು; ಆತನ ಪಾದ ಗಳನ್ನು ತನ್ನ ಕೂದಲಿನಿಂದ ಪ್ರೀತಿಪೂರ್ವಕವಾಗಿ ಒರಸಿದಳು. ಇದ್ದಕ್ಕಿದ್ದಂತೆ ಕೋಣೆಯು ಪ್ರಶಾಂತವಾಯಿತು; ಮಾತು ನಿಂತಿತು; ಸುಗಂಧ ತೈಲದ ಪರಿಮಳ ಕೋಣೆಯಲ್ಲೆಲ್ಲಾ ಹರಡಿತು; ಇಡೀ ಮನೆಯಲ್ಲಿ ತುಂಬಿಹೋಯಿತು. ಮರಿಯಳು ಯಾರಿಗೂ ಕಾಣದಂತೆ ದೇವರನ್ನು ಘನಪಡಿಸಬೇಕೆಂದಿದ್ದಳು. ಆದರೆ ಸುಗಂಧತೈಲದ ಪರಿಮಳದಿಂದಾಗಿ ಜನರೆಲ್ಲರ ಗಮನ ಆಕೆಯತ್ತ ಹರಿಯಿತು. ಆಕೆ ಮಾಡಿದ್ದೇನು?


ಕರ್ತನಿಗೆ ಯಾವುದು ಸುವಾಸನೆಯಾಗಿತ್ತೋ ಅದು ಇಸ್ಕರಿಯೋತ ಯೂದನಿಗೆ ಅಪರಾಧವೆನಿಸಿತು. “ಈ ನಷ್ಟ ಯಾತಕ್ಕೆ? ಈ ತೈಲವನ್ನು ಬಹಳ ಹಣಕ್ಕೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ? ಎಂದು ಅವನು ಟೀಕಿಸಿದನು  . ಉಳಿದವರು ಅವನಿಗೆ ಬೆಂಬಲ ನೀಡಿದರು. ಯೂದನ ಮಾತೇನೂ ಸರಿಯಾಗಿ ಕಂಡರೂ ಬಡವರ ಬಗ್ಗೆ ಅವನಿಗಿದ್ದ ಆಸಕ್ತಿ ಕೇವಲ ನಟನೆಯಾಗಿತ್ತು. ಅವನು ಆ ಹಣವನ್ನು ತನ್ನ ಹಣದ ಚೀಲಕ್ಕೆ ಹಾಕಿಕೊಂಡು ಸ್ವಂತಕ್ಕೆ ಉಪಯೋಗಿಸುತ್ತಿದ್ದನು.


ಮತ್ತೊಮ್ಮೆ ಮರಿಯಳ ಒಳ್ಳೆಯ ಉದ್ದೇಶವನ್ನು ಅಪಾರ್ಥ ಮಾಡಲಾಯಿತು. ಮೊದಲೊಮ್ಮೆ ಸ್ವಂತ ಅಕ್ಕನಾದ ವಾರ್ಥಳೇ ಆಕೆಯನ್ನು ಸೋಮಾರಿಯೆಂದು ನಿಂದಿಸಿದ್ದಳು . (ಲೂಕ  10:40, 41). ಆದರೆ ಯೇಸು ಅವಳ ಉದ್ದೇಶಗಳನ್ನು ತಿಳಿದಿದ್ದನು. ಆದ್ದರಿಂದ ಆತನು ಆಕೆಯ ಪರವಾಗಿ ಮಾತಾಡಬೇಕಾಯಿತು. “ಈಕೆಗೆ ಯಾಕೆ ತೊಂದರೆಕೊಡುತ್ತೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ” ಎಂದು ಆತನು ಸ್ಪಷ್ಟವಾಗಿ ಹೇಳಿದನು (ಪಾರ್ಕ 14:6).


ಯೇಸುವಿನ ಮರಣ ಸವಿಾಪವಾಗುತ್ತಿದೆ ಎಂಬುದನ್ನು ಮರಿಯಳೊಬ್ಬಳೇ ತಿಳಿದಿದ್ದಳು .  ತಾನು ಯೇಸುವಿಗಾಗಿ ಮಾಡಬೇಕಾಗಿದ್ದ ಕಾರ್ಯವನ್ನು ಆಕೆಯು ಅತ್ಯಂತ ಪ್ರಾಮುಖ್ಯವಾದದ್ದೆಂದು ಪರಿಗಣಿಸಿದಳು.


ಆತನು ಆಕೆಯನ್ನು ಪ್ರತಿಪಾದಿಸಿದ್ದಲ್ಲದೆ. “ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ" ಎಂದು ಶ್ಲಾಘಿಸಿದನು (ಮಾರ್ಕ 14:8)


ಆತನ ವಾಕ್ಯಗಳನ್ನು ಮೌನವಾಗಿ ಕೇಳುತ್ತಿದ್ದ ಮರಿಯಳು ಆತ್ಮಿಕ ಒಳದೃಷ್ಟಿ ಯನ್ನು ಹೊಂದಿದ್ದಳು; ಯಾವ ಕಾರ್ಯವನ್ನು ಯಾವಾಗ ಮಾಡಬೇಕೆಂಬುದನ್ನು ತಿಳಿದಿದ್ದಳು; ದೇವರ ರಹಸ್ಯಗಳನ್ನು ಅರಿತಿದ್ದಳು.


ಪ್ರಭುವಿನ ಮಾತುಗಳು ಮರಿಯಳ ಆಲೋಚನೆಗಳನ್ನು ಮಾತ್ರವಲ್ಲದೆ ದೇವರು ವಿಷಯಗಳನ್ನು ಯಾವ ದೃಷ್ಟಿಯಿಂದ ಪರಿಗಣಿಸುತ್ತಾನೆ ಎಂಬುದನ್ನು ಸಹ ಸ್ಪಷ್ಟ ಪಡಿಸಿತು. ತನ್ನ ವಾಕ್ಯದಲ್ಲಿ ಆಸಕ್ತಿ ಹೊಂದಿದ್ದು ಅದರ ಪ್ರಕಾರ ನಡೆಯುವವರನ್ನು ಆತನು ಶ್ಲಾಘಿಸುತ್ತಿದ್ದನು. ತನ್ನ ಜೊತೆಯಲ್ಲಿರುವ ಜನರ ಟೀಕೆಗೆ ಅಂಥ ವ್ಯಕ್ತಿಯು ಹೆದರುವ ಅವಶ್ಯಕತೆಯಿರಲಿಲ್ಲ; ಜನರ ಚುಚ್ಚು ಮಾತುಗಳಿಗೆ ಬೇಸರಪಡುವ ಅಗತ್ಯವಿರಲಿಲ್ಲ. ಯಾಕೆಂದರೆ ಅಂಥವರ ಪರವಾಗಿ ಯೇಸುಸ್ವಾಮಿ ಬಲವಾಗಿ ಪ್ರತಿಪಾದಿ ಸುತ್ತಿದ್ದನು; ಆತನೇ ಅವರ ಅತ್ಯುತ್ತಮವಾದ ವಕೀಲನಾಗಿದ್ದನು.


ಮತ್ತೆಂದೂ ಮರಿಯಳು ದೂಷಣೆಗೆ ಗುರಿಯಾಗಲಿಲ್ಲ. ಬದಲಾಗಿ, ಯೇಸು ಸ್ವಾಮಿ ಆಕೆಯನ್ನು ಯುಗಯುಗಾಂತರಗಳವರೆಗೂ ಸ್ಮಾರಕವನ್ನಾಗಿ ಮಾಡಿದನು. ಅದು ಕಲ್ಲಿನ ಅಥವಾ ಹಿತ್ತಾಳೆಯ ಸ್ಮಾರಕಕ್ಕಿಂತಲೂ ಹೆಚ್ಚಿನದಾಗಿತ್ತು. “ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವದೋ ಅಲ್ಲಲ್ಲಿ ಈಕೆ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ ಹೇಳುವರೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” ಎಂದು ಆತನು ಹೇಳಿದನು (ಮಾರ್ಕ 14:9).


ಮರಿಯಳ ಸುಗಂಧತೈಲದ ಪರಿಮಳ ಇಂದಿಗೂ ಸಹ ಇಡೀ ಲೋಕವನ್ನೆಲ್ಲಾ ವ್ಯಾಪಿಸಿದೆ. ಕೋಟ್ಯಾನುಕೋಟಿ ಜನರು ಆಕೆಯನ್ನು ಹೊಗಳುತ್ತಾರೆ; ಅವಳಿಂದ ಪ್ರೋತ್ಸಾಹಿತರಾಗುತ್ತಾರೆ. ಯಾಕ೦ದರೆ ಆಕೆ ತಾನು ಮಾಡಬಹುದಾದದ್ದನ್ನೆಲ್ಲಾ ಮಾಡಿದಳು . ಮರಿಯಳು ಅತ್ಯುತ್ತಮವಾದುದನ್ನು ಆರಿಸಿಕೊಳ್ಳಲು ಒಳದೃಷ್ಟಿ ಹೊಂದಿದ್ದ ಸ್ತ್ರೀಯಾಗಿದ್ದಳು,


(ಯೋಹಾನ 12:1-11 ; ಮತ್ತಾಯ 26:13;ಅಲ್ಲದೆ ಮಾರ್ಥಳ ಅಧ್ಯಾಯದಲ್ಲಿರುವ ಸತ್ಯವೇದ ಭಾಗಗಳನ್ನು ಓದಿರಿ.)


ಪ್ರಶ್ನೆಗಳು :


1. ಲೂಕ 10:38-42ರಲ್ಲಿ ಮರಿಯಳ ಯಾವ ಗುಣವು ತೋರಿಬಂದಿದೆ?


2. ಯೇಸು ಅವಳನ್ನು ಹೊಗಳಿದ್ದೇಕೆ?


3. ಮತ್ತಾಯ 4:4 ಮತ್ತು 1ಕೊರಿಂಥ 1:9 ರ ಬೆಳಕಿನಲ್ಲಿ ಮರಿಯಳ ಜೀವನವನ್ನು ಪರಿಗಣಿಸಿರಿ, ನೀವು ಕಂಡುಕೊಂಡವುಗಳನ್ನು ಪಟ್ಟಿ ಮಾಡಿ.


4. ಯೋಹಾನ 12:1-8ನ್ನು ಓದಿದ ಮೇಲೆ ಮರಿಯಳ ಬಗ್ಗೆ ನಿಮ್ಮಲ್ಲಿ ಉಂಟಾದ ಆಲೋಚನೆಗಳೇನು? (ಮತ್ತಾಯ 26:6-13 ಮತ್ತು ಮಾರ್ಕ 14-3-9ನ್ನು ಕೂಡ ಓದಿರಿ.)


5. ಯೇಸು ಮರಿಯಳಿಗೆ ಹೇಳಿದ ವಿಷಯಗಳಾವುವು? ಇವುಗಳಲ್ಲಿ ಯಾವುದು ನಿಮ್ಮ ಮೇಲೆ ಅತ್ಯಂತ ಹೆಚ್ಚು ಪ್ರಭಾವ ಬೀರಬಲ್ಲದು? ಯಾಕೆ?


6. ನಿಮ್ಮ ವೈಯಕ್ತಿಕ ಜೀವನದಲ್ಲಿ ಯಾವ ವಿಷಯಗಳಿಗೆ ನೀವು ಹೆಚ್ಚು ಗಮನ ಕೊಡಬೇಕು? ಅದರ ಬಗ್ಗೆ ನೀವೇನು ಮಾಡುತ್ತೀರಿ? 


Post a Comment (0)
Previous Post Next Post