ಸಕಲ ಮಾನವರ ಮಾತೆ ಹವ್ವಳು
(ಆದಿಕಾಂಡ 1:27,28)
ನಮ್ಮ ಕರ್ತನಾದ ಯೇಸು ಕ್ರಿಸ್ತನ ನಾಮಕ್ಕೆ ಸ್ತೋತ್ರ ಉಂಟಾಗಲಿ . ಪ್ರಿಯರೆ ಈ ಸಂದೇಶದ ಮೂಲಕ ನಾವು ಹವ್ವಳ ಜೀವಿತವನ್ನು ಅಧ್ಯಯನ ಮಾಡಿ ಅನೇಕ ಆತ್ಮೀಯ ಸಂಗತಿಗಳನ್ನು ಅರಿಯೋಣ .
👉 ಹವ್ವಳು ಯಾರು ?
ಹವ್ವಳು ದೇವರು ಸೃಷ್ಠಿ ಮಾಡಿದ ಮೊದಲ ಸ್ತ್ರೀ .
ಹವ್ವ ಎಂಬ ಹೆಸರು ಇಬ್ರಿಯ ಭಾಷೆಯ chavah (ಚವ್ಹ) ಎಂಬ ಪದದಿಂದ ಬಂದಿದೆ . ಈ ಹೆಸರಿನ ಅರ್ಥ “ಜೀವ ಅಥವಾ ಜೀವನ (Life/living) .ಆದಿ :3:20 . ಯಾಕೆಂದರೆ ಬದುಕುವವರೆಲ್ಲರಿಗೂ ಅವಳೇ ಮೂಲಮಾತೆ .
"ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟು ಮಾಡಿದನು: ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು: ಅವರನ್ನು ಗಂಡು ಹೆಣ್ಣಾಗಿ ನಿರ್ಮಿಸಿದನು. ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿ - ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿರಿ: ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿ ಕೊಳ್ಳಿರಿ. ಸಮುದ್ರದ “ಏನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ ಅಂದನು.ಆದಿಕಾಂಡ 2:18
ಆದರೆ ದೇವರು ಸ್ವತಃ ತಾನೇ ಮಾಡಿದ ಮದುವೆಯನ್ನು ಕೆಡಿಸಲು ಸೈತಾನನು ಸರ್ಪದ ರೀತಿ ಬಂದು ಹವ್ವಳನ್ನು ವಂಚಿಸಿ ಮೋಸದಿಂದ ಪಾಪದಲ್ಲಿ ಸಿಕ್ಕಿಸಿದನು .
ಪ್ರಿಯ ದೇವಜನರೇ ಹವ್ವಳ ಜೀವಿತದಿಂದ ನಾವು ಕಲಿಯಬೇಕಾದ ಕೆಲವು ಪಾಠಗಳು :
1. ಇರುವದನ್ನು ಬಿಟ್ಟು ಬೇರೆಯವುಗಳ ಕಡೆ ಗಮನ ಕೊಡುವ ಸ್ತ್ರೀ :
ಏದೆನ್ ತೋಟದಲ್ಲಿ ಹವ್ವಳು ಕಂಡ ಪ್ರತಿಯೊಂದೂ ಆಕೆಯ ಮನಸ್ಸನ್ನು ಆಕರ್ಷಿಸಿತು. ಆಕೆಯ ಸುತ್ತಮುತ್ತ ಇದ್ದುದೆಲ್ಲ ಸಂಪೂರ್ಣವಾಗಿತ್ತು. ಆಕೆಯು ಕಂಡ ಪ್ರಕೃತಿ ಹೊಸದೂ ಆಹ್ಲಾದಕರವೂ ಆಗಿತ್ತು. ಆಕೆ ಉಸಿರಾಡಿದ ಗಾಳಿ ಶುದ್ಧವಾಗಿತ್ತು, ನಿಷ್ಕಲ್ಮಷವಾಗಿತ್ತು. ಆಕೆ ಕುಡಿದ ನೀರು ಸ್ವಚ್ಛವಾಗಿತ್ತು ಮತ್ತು ಹೊಳೆಯುತ್ತಿತ್ತು. ಪ್ರತಿಯೊ೦ದು ಪ್ರಾಣಿಯು ಇತರ ಎಲ್ಲಾ ಪ್ರಾಣಿಗಳೊಂದಿಗೆ ಐಕ್ಯಮತ್ಯದಿಂದ ಜೀವಿಸುತ್ತಿತ್ತು.ಆಕೆಯ ವಿವಾಹ ಸಂಪೂರ್ಣವಾಗಿತ್ತು.. ದೇವರೊಂದಿಗೆ ಹಾಗೂ ಪತಿಯೊಂದಿಗೆ ಆಕೆಗೆ ಇದ್ದ ಅನ್ನೋನ್ಯತೆ ಆಕೆಯ ಪ್ರತಿದಿನದ ಆನಂದವಾಗಿತ್ತು. ಯಾರಾದರೂ ಬಯಸಬಹುದಾದ ಪ್ರತಿಯೊಂದೂ ಸೌಕರ್ಯವೂ ಹವ್ವಳಿಗಿತ್ತು.ಪ್ರಿಯರೆ ಇಂತಹ ಅನ್ಯೋನ್ಯತೆ ಇದ್ದರು ಅವಳು ಬೇರೆಯವರ ಮಾತು ಕೇಳಿದ್ದರಿಂದ ಅವರ ಜೀವಿತ ಏನಾಯಿತು ನೋಡೋಣ ಬನ್ನಿ -
ಆದರೆ , ಒಂದು ದಿನ ತೋಟದಲ್ಲಿ ಧ್ವನಿಯೊಂದು, “ತೋಟದಲ್ಲಿರುವ ಯಾವ ಮರದ ಹಣ್ಣನ್ನಾದರೂ ತಿನ್ನಬಾರದೆಂದು ದೇವರು ಹೇಳಿದ್ದಾನೊ ?” ಎಂದು ಕೇಳಿತು. ಪ್ರಿಯರೆ ಇಲ್ಲಿ ದೇವರು ಹೇಳಿದ ವಾಕ್ಯಕ್ಕೆ ಸಂಶಯ ಹುಟ್ಟಿಸುವ ಆ ಸ್ವರಕ್ಕೆ ಅವಳು ಲಕ್ಷ ಕೊಡಬಾರದಿತ್ತು ಆದರೆ ಹವ್ವಳು ತನ್ನ ಗಂಡನ ಮತ್ತು ದೇವರ ಮಾತಿಗಿಂತ ಆ ಮೂರನೆಯವರ ಮಾತಿಗೆ ಕಿವಿಗೊಟ್ಟಳು . ಆ ಮಾರುವೇಷದ ವಂಚಕನ ಎಂಟು ಕೇಳಿ ಮನಸ್ಸಿನಲ್ಲಿ ಆಲೋಚನೆ ಮಾಡತೊಡಗಿದಳು ಹಾಗೆಯೆ “ತೋಟದ ಮಧ್ಯದಲ್ಲಿರುವ ಮರದ ವಿಶಿಷ್ಟ ಚೆಲುವನ್ನು ನಾನೇಕೆ ಗಮನಿಸಲಿಲ್ಲ” ಎಂದು ಆಕೆ ಆಶ್ಚರ್ಯಗೊಂಡಳು. ಆದರೆ ಹಣ್ಣನ್ನು ತಿನ್ನುವುದರಿಂದ ಸರ್ವಸಂತೋಷ ಸಿಗುತ್ತದೆ ಎಂದೇಕೆ ಅನ್ನಿಸುತ್ತಿದೆ? ಇಷ್ಟೊಂದು ಆಸೆಯನ್ನುಂಟುಮಾಡುವ ಹಣ್ಣು ಒಳ್ಳೆಯದೇ ಇರಬೇಕು ಎಂದು ಆಕೆ ಅಂದುಕೊಂಡಳು.
2.ದೇವರ ಮಾತನ್ನು ತಿರುಚಿದ ಸ್ತ್ರೀ :
ಹವ್ವಳ ಆಸೆ ಹೆಚ್ಚಿತು. ತಾನು ಮೋಸವಾಗುತ್ತಿರುವುದನ್ನಾಗಲೀ, ದೇವವಾಕ್ಯ ವನ್ನು ಮಾರ್ಪಡಿಸುತ್ತಿರುವುದನ್ನಾಗಲೀ ದೇವರ ಪ್ರೀತಿಯನ್ನು ಸಂಶಯಿಸುತ್ತಿರುವುದನ್ನಾಗಲೀ ಆಕೆ ಗಮನಿಸಲಿಲ್ಲ. ತನ್ನೊಂದಿಗೆ ಮಾತಾಡುತ್ತಿರುವವನು ಮಾರುವೇಷದ ಸೈತಾನನೆಂದು (ಪ್ರಕಟನೆ 20:2, 2 ಕೊರಿಂಥ 11:14) ಆಕೆಗೆ ತಿಳಿದಿರಲಿಲ್ಲ. ಸೈತಾನನು ಪ್ರಾರಂಭದಿಂದಲೂ (ಯೋಹಾನ 8:44) ಸುಳ್ಳು ಗಾರ, ಕೊಲೆಗಾರ, ಮತ್ತು ಜನರನ್ನು ವಂಚಿಸುವುದೇ (1 ಪೇತ್ರ 5:8) ಅವನ ಆಸೆ, ಅವನು ದೇವರ ಮಾತುಗಳನ್ನು ನಿಖರವಾಗಿ ಉಲ್ಲೇಖಿಸದೆ, ತನ್ನ ಮಾತುಗಳನ್ನು (ಆದಿಕಾಂಡ 2:16,17) ಉಪಯೋಗಿಸಿದನು. ದೇವರ ವಾಕ್ಯದ ಮೇಲೆ ಅವನು ಮಾಡಿದ ಆಕ್ರಮಣವನ್ನಾದರೂ ನೋಡಿ, ಅವನ ಮಾತನ್ನು ಕೇಳದಂತೆ ಆಕೆ ಎಚ್ಚೆತ್ತುಕೊಳ್ಳಬೇಕಿತ್ತು. ಶೋಧನೆಯ (ಯಾಕೋಬ 4:7) ಈ ಘಟ್ಟದಲ್ಲಿ ಸಹ ತಪ್ಪಿಸಿಕೊಳ್ಳಲು ಆಕೆಗೆ ಅವಕಾಶವಿತ್ತು. ಅಪಾಯದಲ್ಲಿ ಶೋಧನೆಯನ್ನು ಎದುರಿಸಬಲ್ಲ ಮನಃಸ್ಥೆರ್ಯ ಆಕೆಗಿತ್ತು. ಸೈತಾನನ ಮಾತನ್ನು ಆಕೆ ಕೇಳಬಾರದಿತ್ತು; ತನ್ನನ್ನು ಮೋಸಗೊಳಿಸಲು ಸೈತಾನನಿಗೆ ಅವಕಾಶ ಕೊಡಬಾರದಿತ್ತು. ಆಕೆಗೆ ಆ ಸ್ವಾತಂತ್ರ್ಯವಿತ್ತು (ಎಫೆಸ 4:27), ಆದರೆ ದುರದೃಷ್ಟಕರವಾಗಿ ಅವಳು ಅವನ ಮಾತನ್ನು ಕೇಳಿದಳು. ಅಲ್ಲದೆ ಅವನಿಗೆ ಉತ್ತರ ಕೊಟ್ಟಳು. ಇದೇ ಅವಳ ಅಧಃಪತನಕ್ಕೆ ನಾಂದಿಯಾಯಿತು.
3. ಮಾತಿನ ಹರಟೆಗೆ ಮನಸೋತ ಸ್ತ್ರೀ :
ಹವ್ವಳು ಸಹ ಸೈತಾನನಂತೆ ದೇವರ ವಾಕ್ಯವನ್ನು ತಿರುವು ಮುರುವು ಮಾಡಿದಳು. ದೇವರ ಮಾತಿಗೆ, “ನೀನು ಅದನ್ನು ಮುಟ್ಟಬಾರದು" ಎಂಬ ಮಾತನ್ನು ಸೇರಿಸಿದಳು. ಆದರೆ ಅದನ್ನು ಮುಟ್ಟುವುದರ ಬಗ್ಗೆ ದೇವರು ಏನನ್ನೂ ಹೇಳಿರಲಿಲ್ಲ. ದೇವರು ಸಾವಿನ ಬಗ್ಗೆ ಸ್ಪಷ್ಟವಾಗಿ ಹೇಳಿದ್ದನ್ನು ಆಕೆ ಮರೆಮಾಡಿದಳು.
ಸೈತಾನನ ಯೋಜನೆಯ ಮೊದಲನೆ ಹಂತ ಯಶಸ್ವಿಯಾಯಿತು. ಹವ್ವಳು ಅವನ ಮಾತನ್ನು ಕೇಳಲು, ಅವನೊಂದಿಗೆ ಕಾಲಹರಣಮಾಡಲು ಇಚ್ಛಿಸಿದಳು. ಇದರಿಂದ ಧೈರ್ಯಗೊಂಡ ಸೈತಾನನು ದೇವರನ್ನೇ ಸುಳ್ಳುಗಾರನೆಂದು ಹೇಳಿದನು. ದೇವರು ತನ್ನ ಶಕ್ತಿಯಿಂದ ಮಾನವನನ್ನು ನಿಯಂತ್ರಿಸಿ , ಅವನ ಸಂತೋಷವನ್ನು ಮೊಟಕು ಗೊಳಿಸುತ್ತಿರುವುದಾಗಿ ಸೈತಾನನು ತಿಳಿಸಿದನು.
4. ಮೋಸದ ಸ್ವಾತಂತ್ರ್ಯವನ್ನು ನಂಬಿದ ಸ್ತ್ರೀ
“ಸಾವೇ"? ಸೈತಾನನು ಹವ್ವಳನ್ನು ಗೇಲಿಮಾಡಿದನು. “ನೀನು ಸಾಯುವುದಿಲ್ಲ. ನೀನೆಂದೂ ನೆನಸದಷ್ಟು ಸಂತೋಷದಿಂದಿರುವೆ. ನೀನು ದೇವರಂತಾಗುವೆ" ಎಂದು ಶೋಧಿಸುತ್ತಾ ಹಾನಿಕರ ಸ್ವಾತಂತ್ರ್ಯದೆಡೆಗೆ ಎಳೆಯತೊಡಗಿದನು. ಅವಿಧೇಯತೆ ಆಕೆಗೆ ಹಾನಿಕರವಾಗಿತ್ತು. ಸೈತಾನನೊಂದಿಗೆ ವಾದಿಸುತ್ತಾ ಹೋದಂತೆ ಆಕೆಯ ಪ್ರತಿಭಟನಾಶಕ್ತಿ ಕುಗ್ಗಿ ಹೋಯಿತು. ತಾನು ಬಯಸಿದ್ದ ಹಣ್ಣನ್ನು ಆಕೆ ಕೈಚಾಚಿ ತೆಗೆದುಕೊಂಡಳು. ಪ್ರಿಯ ಸಹೋದರಿಯರೇ ಇತ್ತೀಚಿನ ಅನೇಕ ಗಂಡ ಹೆಂಡರಲ್ಲಿ, ಕುಟುಂಬಗಳಲ್ಲಿ ಭೇದ ಹುಟ್ಟುವುದು ಮನೆಯವರ ಮಾತು ಕೇಳದೆ ಬೇರೆಯವರ ಮಾತು ಕೇಳಿ ಮನೆಯವರ ಮಾತು ಸುಳ್ಳು ಎಂದು ತಿಳಿಯುವುದು ಮತ್ತು ಸಂಶಯ ಪಡುವುದು ಆಗಿದೆ . ಇಲ್ಲಿ ಹವ್ವಳು ದೇವರ ಮಾತಿಗೆ ಕಿವಿಗೊಡದೆ ಹೋದಳು
ಇಷ್ಟಕ್ಕೆ ಕೇಡು ಕೊನೆಗೊಳ್ಳಲಿಲ್ಲ. ಅವಳು ವಂಚಕನ ಬಲೆಯಲ್ಲಿ ಬಿಡಿಸಿಕೊಳ್ಳ ಲಾಗದಂತೆ ಸಿಕ್ಕಿಕೊಂಡಿದ್ದಳು. ಆಕೆ ಹಣ್ಣನ್ನು ತಿಂದಳು, ಆದರೆ ಅದೇ ಕೊನೆಯಾಗಲಿಲ್ಲ. ಮೋಸಗೊಂಡಿದ್ದ ಹವ್ವಳು ಮೋಸಗಾರ್ತಿಯಾದಳು; ತನ್ನ ಗಂಡನನ್ನೇ ಪಾಪದಲ್ಲಿ ಸಿಕ್ಕಿಸಿದಳು. ಆದಾಮನು ಪ್ರತಿಭಟಿಸದೆ ಅವಳಿಂದ ಹಣ್ಣನ್ನು ತೆಗೆದುಕೊ೦ಡು ತಿಂದನು. ಆ ಕ್ಷಣದಲ್ಲಿ ಅವಳ ಸಂಪೂರ್ಣ ಜೀವನ ಬದಲಾಯಿತು.
ದೇವರ ಸೃಷ್ಟಿಕಾರ್ಯ ಆದರ್ಶಮಯವಾಗಿತ್ತು. ದೇವರಿಗೇ ಅದು ಸಂಪೂರ್ಣ ತೃಪ್ತಿಯನ್ನು ಕೊಟ್ಟಿತ್ತು . ಯಾಕೆಂದರೆ ಆತನು ಉಂಟುಮಾಡಿದ ಎಲ್ಲವೂ ಒಳ್ಳೇದಾಗಿತ್ತು (ಆದಿಕಾಂಡ 1:10, 12, 18, 21, 25). ಸೃಷ್ಟಿ ಕಾರ್ಯದ ಪ್ರತಿಹಂತದಲ್ಲಿ ದೇವರು ಈ ಸತ್ಯವನ್ನು ಸ್ಪಷ್ಟಪಡಿಸಿದನು. ಆದರೂ ಒಂದು ಕಡಿಮೆಯಾಗಿತ್ತು. ಮನುಷ್ಯನು ಒಬ್ಬಂಟಿಗನಾಗಿರುವುದು - ಒಳ್ಳೆಯದಲ್ಲ ; ಅವನಿಗೆ ಸರಿಹೊಂದುವ ಸಹಕಾರಿಯನ್ನು ಸೃಷ್ಟಿ ಮಾಡುವೆನು" ಎಂದು ಪ್ರಭುವಾದ ದೇವರು ಹೇಳಿದನು. ಪುರುಷ ಮತ್ತು ಸ್ತ್ರೀಯನ್ನು ಸೃಷ್ಟಿಸಿದ ಮೇಲೆ ದೇವರ ಕಾರ್ಯ ಪರಿಪೂರ್ಣವಾಯಿತು ಮತ್ತು ಬಹು ಒಳ್ಳೆಯದಾಗಿತ್ತು. (ಆದಿಕಾಂಡ 1:31).
5. ಗಂಡನೊಂದಿಗಿನ ಸಮಾನತೆ ಕಳೆದುಕೊಂಡ ಸ್ತ್ರೀ :
ಹವ್ವಳು ದೇವರ ಕೈ ಕೃತಿಯಾಗಿದ್ದಳು. ತನ್ನ ಗಂಡನಿಗೆ ಸರಿಸಮಾನವಾಗಿ ಆಕೆ ಸೃಷ್ಟಿಗೊ೦ಡಿದ್ದಳು. ದೈಹೀಕ ರಚನೆಯಲ್ಲಿ ಮಾತ್ರ ಅವರಿಗೆ ವ್ಯತ್ಯಾಸವಿತ್ತು. ಆಕೆ ಅದ್ವಿತೀಯಳಾಗಿದ್ದಳು.
ಮಾನವಜೀವಿಯಾದ ಆಕೆ ಸಹ ಆದಾಮನಂತೆ ಆಲೋಚಿಸುವ ಮತ್ತು ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ವರವಾಗಿ ಪಡೆದಿದ್ದಳು. ಆದ್ದರಿಂದ ಆಕೆ ಆದಾಮನೊಂದಿಗೆ ಮಾತಾಡುತ್ತಿದ್ದಳು. ಆಕೆಗೂ ಸಹ ಆದಾಮನಂತೆ ದೇವರೊಂದಿಗೆ ವೈಯಕ್ತಿಕ ಸಂಬಂಧವಿತ್ತು. ಮತ್ತು ಆಕೆ ತನ್ನ ಸೃಷ್ಟಿಕರ್ತನಿಗೆ ವಿಧೇಯಳಾಗಬೇಕಿತ್ತು. ದೇವರ ಉದ್ದೇಶವನ್ನು ಪೂರೈಸಲು ಆದಾಮನೊಂದಿಗೆ ಅವಳು ಸಹ ಜವಾಬ್ದಾರಳಾಗಿದ್ದಳು, ಭೂಮಿಯ ಮೇಲೆ ಜನರು ಹೆಚ್ಚಿ ಅದನ್ನು ಸ್ವಾಧೀನ ಮಾಡಿಕೊಳ್ಳಲು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಸಹಾಯಮಾಡಬೇಕಿತ್ತು. ಆಕೆಗೆ ಗಂಡನೊಂದಿಗೆ ಅನುಪಮವಾದ ಸಂಬಂಧವಿತ್ತು. ಆಕೆ ತನ್ನನ್ನೇ ಅವನೊಂದಿಗೆ ಹಂಚಿಕೊಂಡಿದ್ದಳು. ಅವನನ್ನು ಸಂಪೂರ್ಣ ವ್ಯಕ್ತಿಯನ್ನಾಗಿ ಮಾಡಿದಳು. ಆಕೆಯ ದೈಹೀಕ ರಚನೆ ಅವನಿಗೆ ಸರಿ ಹೊಂದಿತು. ಆದ್ದರಿಂದ ಜನಸಂಖ್ಯೆಯನ್ನು ಹೆಚ್ಚಿಸಬೇಕೆಂಬ ದೇವರ ಆಜ್ಞೆಯನ್ನು ನೆರವೇರಿಸಲು ಅವರಿಗೆ ಸಾಧ್ಯವಾಯಿತು.
ಆದಾಮನ ಸೃಷ್ಟಿಯ ನಂತರ ಹವ್ವಳು ಸೃಷ್ಟಿಗೊಂಡಿದ್ದರೂ, ಈ ಯೋಜನ ದೇವರ ಮನಸ್ಸಿಗೆ ಬಂದದ್ದು ಆದಾಮನ ಸೃಷ್ಟಿಯ ನಂತರವಲ್ಲ. ಆದಾಮನಂತೆ ಹವ್ವಳು ಸಹ ದೇವರ ಮೂಲ ಯೋಜನೆಯ ಒಂದು ಭಾಗವಾಗಿದ್ದಳು. ಅವನ ಸಹಾಯವಿಲ್ಲದೆ ಆಕೆ ಯಾವ ಕಾರ್ಯವನ್ನೂ ಮಾಡಲಾಗಲಿಲ್ಲ. ಅಂತೆಯೇ ಅವನು ಸಹ ಆಕೆಯಿಲ್ಲದೆ ಏನೂ ಮಾಡಲಾಗಲಿಲ್ಲ (1 ಕೊರಿಂಥ 11:11,12). ಅವರ ವಿವಾಹ ಜೀವನದಲ್ಲಿ ಹವ್ವಳು ಆದಾಮನಿಗೆ ಅಧೀನಳಾಗಿದ್ದಳು (ಎಫೆಸ 5:22-24). ದೇವರು ಕ್ರಮವುಳ್ಳ ದೇವರಾಗಿರುವುದರಿಂದ, ಆದಾಮನನ್ನು ಸಾಮಾಜಿಕ ಕ್ರಮಗಳಿಗೆ ನಾಯಕನನ್ನಾಗಿ ಮಾಡಿದನು.
ತ್ರಯಕತ್ವದಲ್ಲಿ, ಮಗನು ತಂದೆಗಿಂತ ಯಾವ ರೀತಿಯಲ್ಲಿಯೂ ಕಡಿಮೆಯಿಲ್ಲ. (ಯೋಹಾನ 5:18;ಫಿಲಿಪ್ಪಿ 2:6), ಆದರೂ ಅವನು ಆತನಿಗೆ ಅಧೀನನಾಗಿದ್ದಾನೆ. ವಿವಾಹದಲ್ಲಿ ಗಂಡ ಹೆಂಡತಿಯರಿಬ್ಬರೂ ಸರಿಸಮವಾಗಿದ್ದಾರೆ (ಗಲಾತ್ಯ 3:28). ಆದರೆ ಕ್ರಿಸ್ತನು ದೇವರಿಗೆ ಅಧೀನವಾಗಿರುವಂತೆ ಹೆಂಡತಿಯು ತನ್ನ ಗಂಡನಿಗೆ ಅಧೀನ ವಾಗಿರಬೇಕು (1 ಕೊರಿಂಥ 11:3), ಆದ್ದರಿಂದ ದೇವರ ಕ್ರಮಕ್ಕನುಸಾರವಾಗಿ ಹೆಂಡ ತಿಯು ಸ್ವತಃ ತಾನೇ ಇಚ್ಛಾಪೂರ್ವಕವಾಗಿ ತನ್ನ ಗಂಡನಿಗೆ ಅಧೀನಳಾಗಿರಬೇಕು.
ಗಂಡ ಮತ್ತು ಹೆಂಡತಿಯರಾದ ಆದಾಮ ಮತ್ತು ಹವ್ವಳು ಹೊಸ ಜೋಡಿಯಾದರು. ಈ ಜೋಡಿ ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿತು. ಅದು ಇಬ್ಬರು ವ್ಯಕ್ತಿಗಳ ಕೂಡುವಿಕೆಯಾಗಿರಲಿಲ್ಲ. ಅದಕ್ಕೆ ತನ್ನದೇ ಆದ ಹೊಸ ಅಸ್ತಿತ್ವವಿತ್ತು. ಪತಿ ಪತ್ನಿಯರು ಸಂಪೂರ್ಣ ಅನ್ಯೋನ್ಯವಾಗಿ ಬದುಕಬೇಕು, ನಿಸ್ಸಂಕೋಚವಾಗಿ ಬೆರತಿರಬೇಕು, ಪರಸ್ಪರ ಪ್ರೀತಿ ಮತ್ತು ಗೌರವದೊಡನೆ ಇರಬೇಕು (ಎಫೆಸ 5:21) ಎಂಬುದೇ ದೇವರ ಯೋಜನೆಯಾಗಿದೆ.
6. ದೇವರ ಪ್ರೀತಿಯ ಅನ್ಯೋನ್ಯತೆ ಕಳೆದುಕೊಂಡ ಸ್ತ್ರೀ :
ಹವ್ವಳು ತನಗಾದ ಮಹಾ ದೋಸವನ್ನು ಅರಿತುಕೊಂಡಳು. ತನಗೆ ಮೊದಲು ಆದಾಮನೊಂದಿಗೆ ಇದ್ದ ಸಂಬಂಧದಿಂದ ಆಕೆ ಅದನ್ನು ಕಂಡು ಕೊಂಡಳು. ಮೊದಲು ಅವರು ನಿಸ್ಸಂಕೋಚವಾಗಿ ಬೆರತಿರುತ್ತಿದ್ದರು, ಆದರೆ ಈಗ ನಾಚಿಕೆ ಮತ್ತು ರಕ್ಷಿಸಿ ಕೊಳ್ಳಲಾಗದ ಸ್ಥಿತಿ ಉಂಟಾಯಿತು. ಮುಗ್ದತೆ ಎಂಬ ಅವರ ರಕ್ಷಣೆ ಹೊರಟು ಹೋಗಿತ್ತು. ಇನ್ನು ಮೇಲೆ, ನಿರ್ಬಂಧವಿಲ್ಲದ, ನಿಸ್ಸಂಕೋಚ ಸಂಬಂಧ ಸಾಧ್ಯವಿಲ್ಲವೆಂದು ಅವರಿಗೆ ತಿಳಿಯಿತು. ಅವರು ಸಂಗತಿಗಳನ್ನು ಒಬ್ಬರಿಗೊಬ್ಬರು ಮರೆಮಾಚತೊಡಗಿದರು. ತಾವು ನಗ್ನರಾಗಿರುವುದಾಗಿ ಅವರಿಗೆ ತಿಳಿಯಿತು. ಅವರ ಪರಿಶುದ್ಧತೆ ಹೊರಟು ಹೋಗಿತ್ತು. ಅವರ ಪಾಪರಹಿತ ಸ್ವಭಾವ ನಾಶವಾಗಿತ್ತು, ದೇವರ ಜೊತೆಗಿದ್ದ ಅವರ ನಿಕಟ ಸಂಬಂಧ ಮುರಿದುಹೋಗಿತ್ತು, ಸೈತಾನನು ಹೇಳಿದಂತೆ, ದೇವರ ಹಾಗೆ ಆಗುವುದರ ಬದಲು, ಆತನನ್ನು ಕಂಡರೆ ಹೆದರಿ, ಆತನಿಂದ ದೂರ ಓಡುವಂತಾದರು.
ವಿನಾಶಕರವಾದ ಈ ಪರಿಸ್ಥಿತಿಯಲ್ಲಿ ದೇವರು ಪ್ರವೇಶಿಸಿದನು. ತಾನೇ ಅವರಿಗಾಗಿ ಹುಡುಕಿದನು, ಪ್ರೀತಿಯಿಂದ ಅವರನ್ನು ವಿಚಾರಿಸಿದನು. ಅವರ ಮೇಲೆ ದೋಷಾ ರೋಪಣೆ ಮಾಡದೆ, ಪ್ರಶ್ನೆಯೊಂದಿಗೆ ತನ್ನ ಮಾತನ್ನು ಆರಂಭಿಸಿದನು, ತಮ್ಮ ಪಾಪ ಗಳನ್ನು ಒಪ್ಪಿಕೊಳ್ಳಲು ಅವರಿಗೆ ಒಂದು ಅವಕಾಶವನ್ನು ಕೊಟ್ಟನು. ಆದರೆ ಈ ಅವಕಾಶವನ್ನು ಅವರು ತಿಳಿದುಕೊಳ್ಳಲಿಲ್ಲ. ಆದಾಮನು ಕುಟುಂಬದ ಯಜಮಾನನಾಗಿದ್ದುದರಿಂದ ದೇವರು ಅವನನ್ನು ಹೊಣೆಗಾರನನ್ನು ಮಾಡಿದನು (ರೋಮಾ 5: 12. 14), ಆದಾಮನು ಅಲ್ಲಿದ್ದರೂ ಪಾಪಮಾಡದಂತೆ ಹವ್ವಳನ್ನು ತಡೆಯಲಿಲ್ಲ. ನಿಜಹೇಳುವುದಾದರೆ ಅವನು ಆಕೆಯೊಂದಿಗೆ ಸೇರಿಕೊಂಡನು ಮತ್ತು ಆಕೆಯ ಮೇಲೆ ತಪ್ಪಹೊರಿಸಿದರು. "ನನ್ನ ಜೊತೆಯಲ್ಲಿರುವುದಕ್ಕೆ ನೀನು ಕೊಟ್ಟ,ಆ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು" ಎಂದು ಹೇಳಿದನು. ತನಗೆ ಹವ್ವಳನ್ನು ಕೊಟ್ಟ ದೇವರೇ ತಪ್ಪು ಮಾಡಿದಂತೆ ಆದಾಮನು ಮಾತನಾಡಿದನು.
ಹವ್ವಳು ಇನ್ನೊಂದರ ಮೇಲೆ ದೋಷಾರೋಪಣೆ ಮಾಡಿದಳು, ಸರ್ಪದ ಮೇಲೆ ತಪ್ಪ ಹೊರಿಸಿದಳು. ಆಕೆ ಪ್ರಾಮಾಣಿಕಳಾಗಿದ್ದರೆ, ತಾನೇ ಸ್ವಇಚ್ಛೆಯಿಂದ ಸರ್ಪದ ಮಾತನ್ನು ಕೇಳಿದ್ದಾಗಿ ಒಪ್ಪಿಕೊಳ್ಳುತ್ತಿದ್ದಳು, ಸರ್ಪವೇನೂ ಅವಳನ್ನೂ ತಪ್ಪುದಾರಿಗೆ ಎಳೆಯಿತು. ಆದರೆ ಆಕೆ ಸ್ವಇಚ್ಛೆಯಿಂದ ಪಾಪಮಾಡಿದ್ದಳು. ದೇವರಿಗೆ ಪ್ರೀತಿ ಪೂರ್ವಕವಾಗಿ ವಿಧೇಯಳಾಗಿರಬೇಕೆಂಬ ಪರೀಕ್ಷೆಯಲ್ಲಿ ಮಾನವಳಾದ ಆಕೆ ಅನುತ್ತೀರ್ಣ ಆದಳು.
ಆಕೆಯ ಕಾರ್ಯದ ವಿನಾಶಕಾರಿ ಫಲಿತಾಂಶವನ್ನು ದೇವರ ನ್ಯಾಯತೀರ್ಪು ಆಕೆಗೆ - ತೋರಿಸಿತು. ಎದೆನಿನ ಸುಂದರ ತೋಟವಲ್ಲದೆ, ಇಡೀ ಪ್ರಪಂಚವೇ ಶಾಪಹೊಂದಿತು. ಕಳೆ ಕೂಡ ಇಲ್ಲದ ಭೂಮಿ, ಈಗ ಮುಳ್ಳುಕಳ್ಳಿಗಳನ್ನು ಉತ್ಪತ್ತಿ ಮಾಡಿತು. ಪ್ರಾಣಿಗಳು ಶಾಪಹೊಂದಿದವು. ಆದಾಮ ಮತ್ತು ಹವ್ವಳು ದೊರೆತನ ನಡೆಸಿದ ಪ್ರಾಣಿ ಸಾಮ್ರಾಜ್ಯದ ಪ್ರಶಾಂತತೆ ಹಾಳಾಗಿತ್ತು, ತೋಳ ಮತ್ತು ಕುರಿಮರಿ ಒಟ್ಟಿಗೆ ಮೇಯುವುದು ಇನ್ನು ಮುಂದೆ ಸಾಧ್ಯವಿರಲಿಲ್ಲ. ಬಲಿಷ್ಠರು ಬಲಹೀನರನ್ನು ಆಳುವಂತಾಯಿತು . ಅವರು ಸದಾಕಾಲ ವಾಸಿಸಬಹುದಾಗಿದ್ದ ಸುಂದರವಾದ ಪರದೈಸು ಕ್ಷಣಾರ್ಧದಲ್ಲಿ ಕಳೆದುಹೋಗಿತ್ತು, ಅಲ್ಲಿಯ ಜೀವವೃಕ್ಷದ ಹಣ್ಣನ್ನು ತಿಂದು, ನಿರಂತರ ಪಾಪಿಗಳಾಗಿ ಬದುಕುವುದನ್ನು ತಪ್ಪಿಸಲು ಅವರನ್ನು ಅಲ್ಲಿಂದ ಬೇಗನೆ ಹೊರಡಿಸ ಲಾಯಿತು (ಅಧಿಕಾಂಡ 3: 22, 23).
7. ಹವ್ವಳ ಪಾಪದ ಮಹಾ ಪರಿಣಾಮ :
ದೇವರ ಸೃಷ್ಟಿಕಾರ್ಯವನ್ನು ಸಂಪೂರ್ಣಮಾಡಿದ ಮತ್ತು ಭೂಮಿಯ ಮೇಲೆ ಸಂತೋಷವೆಂಬ ಸರದಲ್ಲಿ ಕೊನೆಯ ಕೊಂಡಿಯಾಗಿದ್ದ ಹವ್ವಳು ಆ ಸಂತೋಷವನ್ನು ತನ್ನ ಅವಿಧೇಯತೆಯ ಮೂಲಕ ಎಸೆದುಬಿಟ್ಟಳು.
✔ ತಾಯಿಯಾಗುವ ಅವಳ ಸಂತೋಷವನ್ನು ನೋವು ಮತ್ತು ಕಷ್ಟ ಕುಗ್ಗಿಸುತ್ತವೆ. ಒಡೆತನದ ಕೊಂಡಿ, ಆಕೆಯ ಗಂಡನೊಂದಿಗಿರುವ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಅವಳ ಪಾಪದ ದೆಸೆಯಿಂದಾಗಿ ಈಗ ಅವನು ಅವಳ ಮೇಲೆ ದೊರೆತನ ಮಾಡುವನು.
✔ ಆದಾಮ ಮತ್ತು ಹವ್ವಳು ಪಾಪಮಾಡಿದ ಕ್ಷಣದಲ್ಲಿ ಸಾಯದಿದ್ದರೂ, ಸಾವು ಅದರ ಫಲಿತಾಂಶವಾಯಿತು. ಕ್ಷಣಾರ್ಧದಲ್ಲಿ ಅವರು ಮರಣಪಾತ್ರರಾಗಿ ನಶ್ವರ ಮನುಷ್ಯರಾದರು.
✔ ಆದರೆ ಸ್ವಾಭಾವಿಕ ಮರಣಕ್ಕಿಂತ, ದೇವರಿಂದ ದೂರಮಾಡುವ ಆತ್ಮೀಕ ಮರಣ ಕೆಟ್ಟದ್ದಾಗಿತ್ತು (ಆದಿಕಾಂಡ 2:17, ಎಫೆಸ 2:1 ). ಇದನ್ನೆಲ್ಲ ಹವ್ವಳು ತನ್ನ ಅಂತರಾಳದಲ್ಲಿ ನೋವಿನಿಂದ ಅನುಭವಿಸಿದಳು.
✔ ಹೆರಿಗೆ ಸಮಯದಲ್ಲಿ ಹವ್ವಳು ಒಬ್ಬಂಟಿಗಳಾಗಿ ಕಷ್ಟಪಟ್ಟಳು. ಭೂಮಿಯ ಮೊದಲನೆ ಸ್ತ್ರೀಯಾಗಿದ್ದ ಆಕೆಗೆ ತಾಯಿಯಾಗಲೀ, ಸಹೋದರಿಯಾಗಲಿ ಇರಲಿಲ್ಲ. ದುಃಖವನ್ನು ಹಂಚಿಕೊಳ್ಳಲು, ಉಪದೇಶಮಾಡಲು, ಹೆರಿಗೆಯಲ್ಲಿ ಸಹಾಯ ಮಾಡಲು ಆಕೆಗೆ ಯಾರೂ ಇರಲಿಲ್ಲ. ಮಗುವಾಗಿ ಜನಿಸಿಲ್ಲದ ಆಕೆಗೆ ಮಗುವಿನ ಅನುಭವವೇ ಇರಲಿಲ್ಲ. ಆದರೆ ಈಗ ಆಕೆಯೇ ತಾಯಿಯಾಗಿದ್ದಾಳೆ, ಆದರೆ ಮಗುವನ್ನು ಹೇಗೆ ನೋಡಿಕೊಳ್ಳಬೇಕು ಎಂದು ಆಕೆಗೆ ತಿಳಿದಿರಲಿಲ್ಲ. ಇಂಥ ಕಷ್ಟಕಾಲದಲ್ಲಿ ಹವ್ವಳು ಮತ್ತೆ ದೇವರ ಮೊರೆಹೋದದ್ದು ಆಶ್ಚರ್ಯವೇನಲ್ಲ. "ಪ್ರಭುವಿನ ಅನುಗ್ರಹದಿಂದ ಮಗನನ್ನು ಪಡೆದಿದ್ದೇನೆ" ಎಂದು ಹೇಳಿ ತನ್ನ ಮಗುವಿನತ್ತ ನೋಡಿ ಮುಗುಳ್ಳಗೆ ಬೀರಿದಳು (ಆದಿಕಾಂಡ 4: 1).
ದೇವರ ವಿರುದ್ಧವಾಗಿ ಪಾಪಮಾಡಿ ಶಿಕ್ಷೆಗೆ ಗುರಿಯಾದವರು ಹವ್ವಳು ಮತ್ತು ಆದಾಮನು ಮಾತ್ರವಲ್ಲ, ಸೈತಾನನಿಗೆ ಇನ್ನೂ ದೊಡ್ಡ ಶಿಕ್ಷೆಯಾಯಿತು. ಹವ್ವಳ ಸಂತಾನವಾದ ಇಮ್ಯಾನುವೆಲ್' ಎಂಬಾತನು ಅವನನ್ನು ನಾಶಮಾಡುವುದಾಗಿ ಪ್ರವಾದಿಸಲಾಯಿತು (ಯೆಶಾಯ 7:14). ತನ್ನ ಕೈಗಳಲ್ಲಿದ್ದ ಮಗುವೇ ವಾಗ್ದಾನದ ಮೆಸ್ಸಿಯನಾಗಿರಬಹುದೆಂದು ಆಕೆ ಆಸೆ ಪಟ್ಟ ಳೇ? ನಿರೀಕ್ಷಿಸಿದಳೇ?
ಹವ್ವಳು ನಂಬಿಕೆಯ ಜೀವಂತ ನಿರೂಪಣೆಯಾಗಿದ್ದಳು. ಅದು ದೇವರ ಕಡೆಗೆ ತಿರಿಗಿಕೊಳ್ಳುವ ನಂಬಿಕೆಯಾಗಿತ್ತು. ಪಾಪವು ಎಷ್ಟೇ ದೊಡ್ಡದಾಗಿದ್ದರೂ, ದೇವರು ಸಹಾಯ ಮಾಡುತ್ತಾನೆ ಎಂಬ ನಿರೀಕ್ಷೆ ಅದಾಗಿತ್ತು.
ಕಾಯಿನನು ತನ್ನ ತಮ್ಮನನ್ನು ಕೊಂದಾಗ ಹವ್ವಳು ಜರ್ಜರಿತಳಾದಳು. ತಾನು ಈ ಲೋಕಕ್ಕೆ ಒಬ್ಬ ಪಾಪಿಯಾದ ಮನುಷ್ಯನನ್ನು ಕೊಟ್ಟಿರುವುದಾಗಿ ಆಕೆಗೆ ಮನವರಿಕೆ ಯಾಯಿತು. ಅವನು ಕೊಲೆಗಾರನಾಗಿದ್ದನು. ತಾನು ಏದೆನ್ ತೋಟದಲ್ಲಿ ಮಾಡಿದ ಪಾಪದ ಭಯ೦ಕರತೆ ಈಗ ಮತ್ತಷ್ಟು ಸ್ಪಷ್ಟವಾಯಿತು. ಅವಳು ಆಧಾಮನಿಗೆ ಶಾರೀರಕ ಹಾಗೂ ಆತ್ಮೀಕ ಮರಣಗಳಾಗುವಂತೆ ಮಾಡಿದ್ದಳು (ರೋಮ 3:10-12, 23 : 6: 23). ಹುಟ್ಟುವ ಪ್ರತಿ ಮನುಷ್ಯನಿಗೆ ಆದಾಮನಿಂದ ಮರಣವು ಬಂದಿತು. ಆಕೆ ಮುಗ್ಧತೆಯಲ್ಲಿ ಜೀವಿಸಿದಂತೆ ಬೇರೆಯಾರೂ ಜೀವಿಸಲಾರರು. ಒಳಿತು ಕೆಡುಕುಗಳ ನಡುವೆ ನಡೆಯುತ್ತಿರುವ, ಮುಗಿಯದ ಹೋರಾಟವನ್ನು ಪ್ರತಿ ಮನುಷ್ಯನು ಎದುರಿಸುವನು . ಪ್ರತಿಯೊಬ್ಬನು ಪಾಪದ ದೆಸೆಯಿಂದ ದೇವರಿಂದ ಬೇರ್ಪಟ್ಟಿರುವನು. ಇದರಿಂದ ಹೊರತಾದವರು ಯಾರೂ ಇಲ್ಲ.
ಸೈತಾನನು ಮನುಷ್ಯನ ಆಸೆಗಳನ್ನು ಮತ್ತೆ ಮತ್ತೆ ಹೊಡೆದೆಬ್ಬಿಸಿ, ಅವನನ್ನು ಆಕರ್ಷಿಸುತ್ತಾನೆ. ಮನುಷ್ಯನು ತನ್ನ ಆಸೆಗಳಿಗೆ ಬಲಿಯಾದಾಗ ಪಾಪ ಮತ್ತು ಸಾವು ಪ್ರತ್ಯಕ್ಷವಾಗುತ್ತವೆ (ಯಾಕೋಬ 1: 14, 15), ಪ್ರತಿಯೊಂದು ಪೀಳಿಗೆಯಲ್ಲಿ ನೋಡಿದ್ದನ್ನೆಲ್ಲ ಬಯಸುವ ಮತ್ತು ಅಹಂಕಾರದ ಆಸೆಗಳನ್ನು ತೃಪ್ತಿ ಪಡಿಸಲಿಚ್ಛಿಸುವ ಹವ್ವಳಂತಹ ಜನರು ಇರುತ್ತಾರೆ (ಯೋಹಾನ 2: 16). ಸೈತಾನನು ಹವ್ವಳಿಗೆ ಮಾಡಿದಂತೆ ಪ್ರತಿ ಮನುಷ್ಯನನ್ನು ದೇವರ ವಿರುದ್ಧವಾಗಿ ನಡೆಸಲು ಪ್ರಯತ್ನಿಸುವನು. ತಾನು ಅಹಂಕಾರದಿಂದ (ಯೆಶಾಯ 14: 12-15) ಕೆಳಗೆ ಬಿದ್ದಂತೆ ಪ್ರತಿಯೊಬ್ಬ ಮನುಷ್ಯನ ಬೀಳಬೇಕೆಂದು ಅವನು ದಂಗೆಯನ್ನ ಕೆಟ್ಟತನವನ್ನು ಎಬ್ಬಿಸುವನು,
ಏದೇನ್ ತೋಟದಲ್ಲಿ ಈ ಘಟನೆಯಾಗಿ ಅನೇಕಾನೇಕ ವರ್ಷಗಳಾಗಿದ್ದರೂ , ಯೇಸು ಸ್ವಾಮಿ (1 ಯೋಹಾನ 2:2) ಮೂಲಕ ಬಿಡುಗಡೆ ಹೊಂದಿದ ಮೇಲೂ, ಕ್ರಿಸ್ತನನ್ನು ನಂಬಿದ ಪ್ರತಿಯೊಬ್ಬನು ದೇವರೊಂದಿಗೆ ಒಂದಾಗಲು (ಯೋಹಾನ 1:12, 13) ಸಾಧ್ಯವಿರು ವಾಗಲೂ, ಮನುಷ್ಯರಲ್ಲಿ ಉತ್ತಮರೆನಿಸಿಕೊಂಡ ಅನೇಕರು ತಾವು ಒಳ್ಳೆಯದನ್ನು ಮಾಡಬೇಕೆಂದುಕೊಂಡರೂ ಕೆಟ್ಟದ್ದರ ಕಡೆಗೆ ಸೆಳೆಯಲ್ಪಡುತ್ತಿದ್ದಾರೆ.(ರೋಮ 7:15–19)
ದೇವರ ವಾಕ್ಯಕ್ಕೆ ಆತುಕೊಂಡರೆ ಮತ್ತು ಅದರಂತೆ ಜೀವಿಸಿದರೆ (ಮತ್ತಾಯ 4:1-11) ಮನುಷ್ಯನು ಶೋಧನೆಯನ್ನು ಗೆಲ್ಲಬಲ್ಲನೆಂದು ತಿಳಿಸಿದ ಏಕೈಕ ವ್ಯಕ್ತಿಯೆಂದರೆ ನಮ್ಮ ಕರ್ತನಾದ ಯೇಸುಕ್ರಿಸ್ತನು.
ಆದಾಮ ಮತ್ತು ಹವ್ವಳ ಪಾಪದ ಪರಿಣಾಮ, ಈಗಿರುವ ಕಣ್ಣೀರು, ಗೋಳಾಟ ಮತ್ತು ನೋವು . ಇದೆಲ್ಲವೂ ಹೊಸ ದೇವರ ರಾಜ್ಯ ಬರುವವರೆಗೆ ಇರುತ್ತದೆ. (ಪ್ರಕಟನೆ 21:1, 4) ಅಲ್ಲಿಯವರೆಗೆ, ಹವ್ವಳನ್ನು ಅನುಸರಿಸದಂತೆ ಪ್ರತಿಯೊಬ್ಬರಿಗೂ ಎಚ್ಚರಿಕೆ ಕೊಡಲಾಗು ವುದು (2 ಕೊರಿಂಥ 11:3) ಯಾಕಂದರೆ ಸಕಲ ಮಾನವರಿಗೆ ತಾಯಿಯಾದ ಹವ್ವಳು ನಮ್ಮೆಲ್ಲರಿಗೂ ಭಯಂಕರ ಉದಾಹರಣೆಯಾಗಿದ್ದಾಳೆ. ದೇವರ ವಾಕ್ಯದ ಮೇಲೆ ಮತ್ತು ಆತನ ಪ್ರೀತಿಯ ಮೇಲೆ ಸಂಶಯವನ್ನುಂಟುಮಾಡಲು ಆಕೆ ಸೈತಾನನಿಗೆ ಅವಕಾಶವನ್ನು ಕೊಟ್ಟಾಗಲೇ ಈ ಪ್ರಪಂಚಕ್ಕೆ ಪಾಪ ಪ್ರವೇಶಿಸುವಂತೆ ಮಾಡಿದಳು.( References : ಆದಿಕಾಂಡ : 1:27, 28; 2:18, 20-25; 3:1-20)
ಈ ಸಂದೇಶದ ಕುರಿತು ಕೆಲವು ಪ್ರಶ್ನೆಗಳು:
1. ಆದಾಮ ಮತ್ತು ಹವ್ವರಿಗೆ ಎಷ್ಟು ಮಕ್ಕಳಿದ್ದರು ?
ಸತ್ಯವೇದ ನಮಗೆ ನಿರ್ದಿಷ್ಟವಾಗಿ ಮಕ್ಕಳ ಅಂಕಿ ಅಂಶ ನೀಡಿಲ್ಲ . ಆದಾಮ ಮತ್ತು ಹವ್ವ ಕಾಯಿನ (ಆದಿಕಾಂಡ 4:1), ಹೇಬೆಲ (ಆದಿಕಾಂಡ 4:2), ಸೇಥ (ಆದಿಕಾಂಡ 4:25), ಮತ್ತು ಇತರ ಅನೇಕ ಗಂಡು ಮತ್ತು ಹೆಣ್ಣು ಮಕ್ಕಳನ್ನು ಹೊಂದಿದ್ದರು (ಆದಿಕಾಂಡ 5:4). ಆದಾಮ ಹವ್ವರು ಅನೇಕ ವರಷುಗಳ ಕಾಲ ಜೀವಿಸುವ ಸಾಮರ್ಥ್ಯ ಇದ್ದಿದ್ದರಿಂದ ಹವ್ವಳು ಅನೇಕ ಮಕ್ಕಳನ್ನು ಹೆರುವ ಸಾಮರ್ಥ್ಯದೊಂದಿಗೆ ತಮ್ಮ ಜೀವಿತಾವಧಿಯಲ್ಲಿ 50+ ಮಕ್ಕಳನ್ನು ಹೊಂದಿರಬಹುದು ಎಂದು ಅಂದಾಜಿಸಬಹುದು
2. ಆದಾಮ ಮತ್ತು ಹವ್ವ ಹೊಟ್ಟೆ ಹೊಕ್ಕುಳನ್ನು ಹೊಂದಿದ್ದೀರಾ? belly buttons ?
ಹೊಟ್ಟೆಯಲ್ಲಿರುವ ಮಗುವನ್ನು ಅದರ ತಾಯಿಯೊಂದಿಗೆ ಸಂಪರ್ಕಿಸುವ ಹೊಕ್ಕುಳಬಳ್ಳಿಯಿಂದ ಹೊಕ್ಕುಳಿನ / ಹೊಕ್ಕುಳ ರಚನೆಯಾಗುತ್ತದೆ. ಆದಾಮ ಮತ್ತು ಹವ್ವ ತಾಯಿಯಿಂದ ಜನಿಸದೆ ದೇವರಿಂದ ನೇರವಾಗಿ ಸೃಷ್ಟಿಸಲ್ಪಟ್ಟರು ಮತ್ತು ಸಾಮಾನ್ಯ ಜನನ ಪ್ರಕ್ರಿಯೆಯ ಮೂಲಕ ಜನಿಸಲಿಲ್ಲ . ಆದ್ದರಿಂದ, ಆದಾಮ ಮತ್ತು ಹವ್ವ ಬಹುಶಃ ಹೊಕ್ಕುಳನ್ನು / ಹೊಟ್ಟೆ ಗುಂಡಿಗಳನ್ನು ಹೊಂದಿರುವುದಿಲ್ಲ.
3. ಸರ್ಪವೆಂದರೆ ಯಾರು? (ಪ್ರಕಟನೆ 20:2, ಯೋಹಾನ 8:44) ಅವನು ಹವ್ವ ಳನ್ನು ವಂಚಿಸುವಾಗ ಯಾವ ಯುಕ್ತಿ ಕೌಶಲಗಳನ್ನು ಉಪಯೋಗಿಸಿದನು?
4. ಮತ್ತಾಯ 4:1-11 ಹಾಗೂ 1 ಯೋಹಾನ 2:16 ರ ಪ್ರಕಾರ, ಅವನು ಇನ್ನೂ ನಿರತನಾಗಿರುವ ಕೆಲಸ ಯಾವುದು?
5. ಒಬ್ಬ ಮನುಷ್ಯನು ಶೋಧನೆಯನ್ನು ತಾಳಿಕೊಳ್ಳಬಲ್ಲನೇ ? ನಿರೂಪಿಸಿ.
6. ಪಾಪ ಮಾಡುವುದಕ್ಕಿಂತ ಮೊದಲು ಹವ್ವಳ ಜೀವನದ ಸೊಬಗನ್ನು ವಿವರಿಸಿ.
7. ಪಾಪ ಮಾಡಿದ ಮೇಲೆ ಏನಾಯಿತು? ನೀವು ಗುರುತಿಸಬಹುದಾದ ಬದಲಾವಣೆ ಗಳನ್ನು ತಿಳಿಸಿ.
8. ನಿಮ್ಮ ಅಭಿಪ್ರಾಯದ ಪ್ರಕಾರ, ಈ ಕತೆ ಕೊಡುವ ಅತ್ಯಂತ ಮುಖ್ಯವಾದ ಎಚ್ಚರಿಕೆ ಯಾವುದು? ನಿಮ್ಮ ವೈಯಕ್ತಿಕ ಜೀವಿತದ ಮೇಲೆ ಇದು ಹೇಗೆ ಪ್ರಭಾವ ಬೀರುತ್ತದೆ ?
0 ಕಾಮೆಂಟ್‌ಗಳು