ಪ್ರವಾದಿ ಯೋನ ಭಾಗ-2 /prophet Jonah part -2

ಪ್ರವಾದಿ ಯೋನ ಭಾಗ - 2 

    

                ಪ್ರಿಯ ದೇವ ಜನರೆಲ್ಲರಿಗೆ ಕರ್ತನಾದ ಯೇಸುಕ್ರಿಸ್ತನ ನಾಮದಲ್ಲಿ ವಂದನೆಗಳು. 

        ನೀವು ಪ್ರವಾದಿ ಯೋನ ಭಾಗ-1 ಓದಿದ ನಂತರ ಭಾಗ-2  ಓದುವುದಾದರೆ ನಿಮಗೆ ಪ್ರವಾದಿಯಾದ ಯೋನನಿಂದ ಕಲಿಯಬೇಕಾದಂತ ಅದ್ಭುತ ಸತ್ಯ ಸಂಗತಿಗಳು ಸುಲಭವಾಗಿ ಪವಿತ್ರಾತ್ಮನ ಸಹಾಯದಿಂದ ಅರ್ಥಮಾಡಿಕೊಳ್ಳಬಹುದು. 

     ಪ್ರವಾದಿ ಯೋನ ಭಾಗ-1 ಸಂದೇಶದಲ್ಲಿ ಯೋನ ಅನುಭವಿಸಿದ ಕೇಡಿನ ಬಗ್ಗೆ ಮತ್ತು  ದೇವರ  ಗುಣಗಳ ಕುರಿತು  ನೋಡಿದ್ದೇವೆ.  ಈಗ ಭಾಗ-2 ರಲ್ಲಿ ಅವನ ಜೀವಿತದ ಕುರಿತು ಮತ್ತು ಆತನ ಜೀವಿತದಿಂದ ನಮ್ಮ ದೇವರು ಎಂಥ ಅದ್ಭುತ ದೇವರು ಎಂಬ ಅನೇಕ ಗೂಡಾರ್ಥಗಳನ್ನು ಮತ್ತು ನಮ್ಮ ದೇವರ ಕುರಿತ ಆತ್ಮೀಯ ಗೂಡಾರ್ಥಗಳನ್ನು ಈ ಭಾಗದಲ್ಲಿ ಅಧ್ಯಯನ ಮಾಡೋಣ .

 ✔ ನಮ್ಮ ದೇವರು ಎಂತಹ ದೇವರಾಗಿದ್ದಾನೆ ?

1. ತಿದ್ದಿ ಸರಿಪಡಿಸುವ ದೇವರು :

        ಪ್ರಿಯರೇ ಪ್ರವಾದಿ ಯೋನನು "ದೇವರು ಹೇಳಿದ ಮಾತನ್ನು ಕೇಳದೆ ಇದ್ದಿದ್ದರಿಂದ ಈ ಕೇಡು ನನಗೆ ಸಂಭವಿಸಿದೆ" ಎಂದು ತಿಳಿದು ನನ್ನನ್ನು ಸಮುದ್ರದಲ್ಲಿ ಹಾಕಿರಿ ಎಂದು ಯೋನನು ಹಡಗಿನಲ್ಲಿ ಇದ್ದ ಉಳಿದ ಪ್ರಯಾಣಿಕರಿಗೆ ಕೇಳಿಕೊಂಡನು ಆದರೆ ಪ್ರಯಾಣಿಕರು ಒಪ್ಪದೆ ದಡಕ್ಕೆ ಹಿಂದಿರುಗಬೇಕೆಂದು ಪ್ರಯತ್ನಿಸಿದರು ಆಗದೆ ಹೋದಾಗ ಅನಿವಾರ್ಯವಾಗಿ ಬೇರೆ ದಾರಿ ಇಲ್ಲದೆ ಯೋನನನ್ನು ಸಮುದ್ರದಲ್ಲಿ ಹಾಕಿದ್ದಕ್ಕೆ ನಮ್ಮನ್ನು ಶಿಕ್ಷಿಸ ಬೇಡವೆಂದು ದೇವರಿಗೆ ಮೊರೆಯಿಟ್ಟು ಕ್ಷಮಾಪನ ಕೇಳಿ ಅವನನ್ನು ಸಮುದ್ರದಲ್ಲಿ ಹಾಕಿದರು . 

God Commands to Big Fish


    ಆಗ ದೇವರು ಒಂದು ದೊಡ್ಡ ಮೀನಿಗೆ ಅಪ್ಪಣೆ ಮಾಡಿ ಸಮುದ್ರದಲ್ಲಿ ಬಿದ್ದ ಇವನನ್ನು ನುಂಗಲು ಕಳುಹಿಸಿದನು. ಪ್ರಿಯರೇ ದೇವರು ಸೃಷ್ಟಿಸಿರುವ ಎಲ್ಲ ಜೀವರಾಶಿಗಳು ಕರ್ತನ ಮಾತನ್ನು ಕೇಳುತ್ತವೆ ಆದರೆ ಮನುಷ್ಯನು ಮಾತ್ರ ಯಾವಾಗಲೂ ದೇವರ ಕರೆಗೆ ಓಗೊಡದೆ ದೂರವಾಗುತ್ತಾನೆ . ಅಂತವರನ್ನು ಸರಿಪಡಿಸಲು ದೇವರು ತನ್ನ ಸೃಷ್ಟಿಯನ್ನು ಉಪಯೋಗಿಸಿಕೊಂಡು ತಕ್ಕ ಪಾಠ ಕಲಿಸುತ್ತಾನೆ.  ಈ ರೀತಿ ಯೋನನ ಜೀವಿತದಲ್ಲಿಯೂ ದೇವರು ನಡೆಸಿದನು . ನಂತರ ಯೋನನು ಮೀನಿನ ಹೊಟ್ಟೆಯೊಳಗೆ ಇದ್ದು ತನ್ನ ತಪ್ಪಿನ ಅರಿವಾಗಿ ಪ್ರಾರ್ಥನೆ ಮಾಡುತ್ತಾನೆ.

    ಪ್ರಿಯರೇ ನಾವು ಕೂಡ ಅನೇಕ ಸಾರಿ ಕಷ್ಟಗಳು, ಅನಾರೋಗ್ಯ & ಚಿಂತೆ ಬಂದಾಗಲೇ ಪ್ರಾರ್ಥಿಸುತ್ತೇವೆ. ಹಾಗೆಯೇ ಜನರು ಕೂಡ, ಆದರೆ ದೇವ ಜನರಾದ ನಾವು ನಮಗೆ ಆರೋಗ್ಯ ಇರುವಾಗಲೇ ಸಂತೋಷ ಇರುವಾಗಲೇ ಕರ್ತನನ್ನು ಸ್ತುತಿಸಬೇಕು ಪ್ರಾರ್ಥಿಸಬೇಕು . ಇಲ್ಲವಾದರೆ ದೇವರು ನಮ್ಮನ್ನು ಸರಿಪಡಿಸಲು ಏನು ಬೇಕಾದರೂ ಉಪಯೋಗಿಸಿಕೊಳ್ಳುತ್ತಾನೆ ಮತ್ತು ನಮ್ಮನ್ನು ಸರಿಪಡಿಸುವವನಾಗಿದ್ದಾನೆ. ಏಕೆಂದರೆ ಕರ್ತನು ತಾನು ಪ್ರೀತಿಸುವವರನ್ನೇ ಶಿಕ್ಷಿಸುತ್ತಾನೆ(ಇಬ್ರಿಯ: 12:5-6) ಎಂದು ಬರೆದಿದೆ

2. ಎರಡನೆ ಅವಕಾಶ ಕೊಡುವ ದೇವರು (ಅಧ್ಯಾಯ :3) 

    ಇಲ್ಲಿ ನಾವು ನೋಡುವಂತೆ ಮೀನಿನ ಹೊಟ್ಟೆಯೊಳಗೆ ಇದ್ದ ಯೋನನೋ  ಇತ್ತ ಪ್ರಾರ್ಥಿಸುವಾಗ ದೇವರು ಆ ದೊಡ್ಡ ಮೀನಿಗೆ ಅಪ್ಪಣೆಕೊಡಲು ಅದು ಯೋನನನ್ನು ಸಮುದ್ರದ ದಡದಲ್ಲಿ ಒಣ ನೆಲದಲ್ಲಿ ಕಾರಿತು . 

Big Fish


    ತನ್ನ ತಪ್ಪಿನ ಅರಿವಾಗಿ ಕ್ಷಮಾಪಣೆ ಹೊಂದಿದ ಯೋನನಿಗೆ ದೇವರು ಎರಡನೆಯ ಸಾರಿ ನಿನೆವೆ  ಪಟ್ಟಣಕ್ಕೆ ಪ್ರವಾದಿಸಲು ಕಳುಹಿಸಿದನು(3:1) .

    ಪ್ರಿಯರೇ ಯೋನನು ಕ್ಷಮಾಪನೆ ಕೇಳದೆ ಇದ್ದರೆ ಏನಾಗುತ್ತಿತ್ತು.  ದೇವರು ಆ ಕೆಲಸಕ್ಕೆ ಬೇರೊಬ್ಬನನ್ನು ನೇಮಿಸುತ್ತಿದ್ದನು . ಆದರೆ ನಮ್ಮ ದೇವರು ನಮ್ಮನ್ನು ಕರುಣಿಸುವವನಾಗಿದ್ದದರಿಂದ ಆತನು ಹಾಗೆ ಮಾಡದೇ ಮತ್ತೊಂದು ಅವಕಾಶ ಕೊಟ್ಟನು . ಅಂದರೆ ನಮ್ಮ ದೇವರು ಪ್ರತಿಯೊಬ್ಬರಿಗೆ ಅಂದರೆ ತನ್ನ ಮಕ್ಕಳಿಗೆ ಎರಡನೇ ಅವಕಾಶ ಕೊಡುವ ದೇವರಾಗಿದ್ದಾನೆ . 

    ಪ್ರಿಯ ಓದುಗರೆ ನೀವು ಕೂಡ ಒಂದು ವೇಳೆ ದೇವರ ಸಭೆಯಿಂದ, ಕೂಟಗಳಿಂದ, ಪ್ರಾರ್ಥನೆಯಿಂದ, ವಾಕ್ಯವನ್ನು ಓದುವುದರಿಂದ & ಸಭೆಯ ಕಾರ್ಯಗಳನ್ನು ಮಾಡುವುದರಿಂದ ದೂರವಾಗಿದ್ದರೆ ಇಲ್ಲವೇ ಬಿಟ್ಟುಬಿಟ್ಟಿದ್ದರೆ ದೇವರು ತನ್ನ ವಾಕ್ಯದಿಂದ ನಿಮ್ಮನ್ನು ಎಚ್ಚರಿಸುತ್ತಿದ್ದಾನೆ .(ಪ್ರಕಟಣೆ:2:5). ನೀವು ತಿರುಗಿ ಕ್ಷಮಾಪನೆ ಕೇಳುವುದಾದರೆ ಕರ್ತನು ನಿಮ್ಮನ್ನು ಕ್ಷಮಿಸಿ ಮತ್ತೆ ತನ್ನ ಆಶೀರ್ವಾದದಿಂದ ಬಲಪಡಿಸುವವನಾಗಿದ್ದಾನೆ.  ಇಲ್ಲವಾದರೆ ನೀವು ಇರುವ ಸ್ಥಾನಕ್ಕೆ ಆತನು ಬೇರೊಬ್ಬರನ್ನು ನೇಮಿಸುವವನಾಗಿದ್ದಾನೆ.  ನಿಮ್ಮೊಳಗೆ ಏನಾದರೂ ಇಂತಹ ಆಲೋಚನೆಗಳಿದ್ದರೆ ನಾನು ಪಾಸ್ಟರ್ ಮಗನಾಗಿದ್ದೇನೆ, ನಾನು ಆ ಸೇವಕರ ಮಗ, ನಾನು ಮಾತ್ರ ಪ್ರಸಂಗ ಮಾಡಬೇಕು! ನಾನು ಮಾತ್ರ ಪ್ರಾರ್ಥಿಸಬೇಕು, ನಾನು ಮಾತ್ರವೇ!! ನನ್ನಿಂದಲೇ ಎಲ್ಲವೂ ಆಗಬೇಕು ಎಂಬ ಗರ್ವ ನಿಮಗಿದ್ದರೆ ಕರ್ತನು ನಿಮ್ಮನ್ನು ನಿಮ್ಮ ಸ್ಥಾನದಿಂದ ಇಳಿಸಿ ತನಗೆ ಇಷ್ಟರಾದವರನ್ನು ತನಗೆ ವಿಧೇಯರಾಗುವವರನ್ನು ಆ ಸ್ಥಾನಕ್ಕೆ ನೇಮಿಸುತ್ತಾನೆ.

     ಕೇಳಿರಿ ಯಾವ ಪ್ರವಾದಿ ಮಂಡಳಿಗೆ ಸೇರದೆ ಇರುವ ಗೊಲ್ಲನಾಗಿರುವ ಹತ್ತಿ ಹಣ್ಣು ಕೀಳುವ ಸಾಮಾನ್ಯ ಮನುಷ್ಯನಾದ ಆಮೋಸನನ್ನು ದೇವರು ಇಸ್ರಾಯೇಲ್ಯರಿಗೆ ಪ್ರವಾದಿಸಲು ಆರಿಸಿಕೊಂಡನು(ಆಮೋಸ :7:14).  ಹಾಗಾದರೆ ನೀವು ಕರ್ತನ ಕಾರ್ಯಗಳನ್ನು ನನ್ನ ಹೊರತು ಯಾರು ಮಾಡಬಲ್ಲರು ಎಂಬ ಗರ್ವ ನಿಮಗಿರುವುದಾದರೆ ಕರ್ತನು ನಿಮ್ಮನ್ನು ಆ ಸ್ಥಾನದಿಂದ ತೆಗೆದು ಆ ಕಾರ್ಯಕ್ಕೆ ನಂಬಿಗಸ್ತರಾದ ಸಾಮಾನ್ಯ ಭಕ್ತರನ್ನು  ನೇಮಿಸಲು ಶಕ್ತನಾಗಿದ್ದಾನೆ.  ಆದ್ದರಿಂದ  ಇವತ್ತೇ ನಿಮ್ಮನ್ನು ಸರಿಪಡಿಸಿಕೊಂಡು ಕರ್ತನ ಕಾರ್ಯಗಳನ್ನು ಸೇವೆಯ ಕಾರ್ಯಗಳನ್ನು ಬಹಳ ಆಸಕ್ತಿಯಿಂದ ಮಾಡಿರಿ ಮತ್ತು ಗುಣಗುಟ್ಟದೆ ಮುಂದುವರೆಸಿರಿ .

3. ಕ್ಷಮಿಸುವ ದೇವರು (3:1-10)

      ಪ್ರವಾದನೆ ಹೇಳುವ ಎರಡನೆಯ ಅವಕಾಶವನ್ನು ಕರ್ತನಿಂದ  ಪ್ರವಾದಿಯಾದ ಯೋನನು  ಪಡೆದು ನಿನೆವೆ  ಪಟ್ಟಣಕ್ಕೆ ಪ್ರಯಾಣಮಾಡಿ ಪಟ್ಟಣದ ಜನರಿಗೆ ಅವರ ಪಾಪಗಳ ಕುರಿತು , ಪಟ್ಟಣದ ನಾಶನದ ಕುರಿತು ತಿಳಿಸಲು ಪ್ರಾರಂಭಿಸಿದನು. ಆ ಊರಿನ ಜನರಾದರೋ ಬಹಳ ದುಷ್ಟರಾಗಿದ್ದರು. ಯೋನನು ದೇವರು ಹೇಳಿದಂತೆ ಆ ಪಟ್ಟಣವು “ನಲವತ್ತು ದಿವಸದ ನಂತರ ನಿನೆವೆ ನಾಶವಾಗುವುದು” ಎಂದು ಜನರಿಗೆ ಸಾರಿದಾಗ ಅಲ್ಲಿರುವ ಜನರು  ಉಪವಾಸ ಮಾಡಿದರು.

Repentance by Nineve people


     ಈ ಸುದ್ಧಿ ನಿನೆವೆ ರಾಜನಿಗೆ ತಿಳಿದು ಅವನು ಕೂಡ ಗೋಣಿತಟ್ಟು ಸುತ್ತಿಕೊಂಡು ದೇವರಿಗೆ ಬಲವಾಗಿ ಮೊರೆಯಿಡಲು ಪ್ರಾರಂಭಿಸಿದನು .  ಪಟ್ಟಣದ ಎಲ್ಲ ಜನರಿಗೂ ಹಾಗೂ ಜನ,ಪಶು,ಮುಂದೆ,ಹಿಂಡು ಎಲ್ಲರೂ ಉಪವಾಸ ಮಾಡಲು ಮತ್ತು ಕರ್ತನಿಗೆ ಮೊರೆಯಿಡಲು ರಾಜಾಜ್ಞೆಯನ್ನು ಅರಸನು ಹೊರಡಿಸಿದನು . ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಕರ್ತನಿಗೆ ಮೊರೆ ಇಡಲು ದೇವರು ಅವರ ಮೊರೆಯನ್ನು ಕೇಳಿ ಅವರಿಗೆ ಮಾಡಬೇಕೆಂದಿದ್ದ ಕೇಡನ್ನು ಮಾಡದೆ ಅವರನ್ನು ಕ್ಷಮಿಸಿದನು. ಈ ಸಂದೇಶವನ್ನು ಓದುತ್ತಿರುವ ಪ್ರಿಯ ದೇವಜನರೇ ನಾವು ಕೂಡ ಜನರು ದುಷ್ಟರಾಗಿರಲಿ ಕೆಟ್ಟವರಾಗಿರಲಿ ಅವರಿಗೆ  ಹೆದರದೆ ನಾವು  ಸುವಾರ್ತೆ ಹೇಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. 

 ನಮ್ಮ ಕರ್ತನಾದ ಯೇಸುಕ್ರಿಸ್ತನ  ಎರಡನೆಯ ಬರೋಣ  ಏಕೆ  ತಡವಾಗುತ್ತಿದೆ ಎಂದರೆ ನಾವು ಆತನ ಸುವಾರ್ತೆಯನ್ನು ಲೋಕದ ಜನರಿಗೆ ಹೇಳದೆ ಇದ್ದಿದ್ದರಿಂದಲೇ.  ಪ್ರಿಯರೇ ನಾವು ಆತನ ಸುವಾರ್ತೆಯನ್ನು ಸಾರಲು ಸುವಾರ್ತೆಯನ್ನು ಸಾರುವ  ಸೇವಕರನ್ನು ಸಿದ್ಧಗೊಳಿಸಲು, ಸುವಾರ್ತೆಗಾಗಿ ಪ್ರಯಾಸಪಡುವ ಮತ್ತು ಜಗತ್ತಿನಾದ್ಯಂತ ಸುವಾರ್ತೆ ಸೇವೆಗಾಗಿ ಭಾರದಿಂದ  ಪ್ರಾರ್ಥಿಸೋಣ .

ಒಂದು ನಿದರ್ಶನವನ್ನು ನೆನಪಿಸಿಕೊಳ್ಳೋಣ ಒಮ್ಮೆ ಒಬ್ಬ ಸೇವಕರು ಅಪರಿಚಿತ ದಾರಿಹೋಕನನ್ನು ಮಾತನಾಡಿಸುತ್ತಾ ಯೇಸುಕ್ರಿಸ್ತನ ವಿಷಯವಾಗಿ ಹೇಳುತ್ತಾ ದಾರಿಹೋಕನಿಗೆ “ನೀನು ಇವತ್ತು  ಸತ್ತರೆ ನಿನ್ನ ಆತ್ಮ ಎಲ್ಲಿಗೆ ಹೋಗುತ್ತದೆ? ನಿನ್ನ ಆತ್ಮದ ಚಿಂತೆ ನಿನಗೆ ಇದೆಯೋ ?” ಎಂದು ಆ ದಾರಿಹೋಕನಿಗೆ ಆ ಸೇವಕರು ಪ್ರಶ್ನಿಸಿದರಂತೆ. ಆದರೆ ಅದಕ್ಕೆ ಅಪರಿಚಿತ ವ್ಯಕ್ತಿ ನನ್ನ ಆತ್ಮದ ಚಿಂತೆ ನನಗಿರಬೇಕು ನಿನಗೇಕೆ ? ಎಂದು ಮರು ಪ್ರಶ್ನಿಸಿದನು. ಅದಕ್ಕೆ ಆ ಸೇವಕರು ಸಹೋದರ ನಿನ್ನ ಆತ್ಮದ ಚಿಂತೆ ನನಗಿದೆ….  ಯಾಕಂದರೆ ಅದನ್ನು ಪಾಪಿಗಳ ವಿಮೋಚಕನು ನಮ್ಮ ಕರ್ತನು ಆದ ಯೇಸುಕ್ರಿಸ್ತನು ನನಗೆ ಕೊಟ್ಟಿದ್ದಾನೆ ಎಂದು ಹೇಳಿದರು.  ಇದನ್ನು ಕೇಳಿದ ಆ ವ್ಯಕ್ತಿ ಹಾಗಾದರೆ ನೀನು ಖಂಡಿತವಾಗಿಯೂ ಡಿಎಲ್ ಮೂಡಿ ಯಾಗಿರಬೇಕು ಎಂದರಂತೆ.  ಅಂದರೆ ಡಿಎಲ್ ಮೂಡಿ ಅವರು ಯಾವಾಗಲೂ ತಾವು ಇದ್ದ ಊರಿನಲ್ಲಿ ಯಾರನ್ನೇ ಹೊಸದಾಗಿ ಕಂಡರೂ ಅವರಿಗೆ ಒಂದು ಸಾರಿಯಾದರೂ ಸುವಾರ್ತೆ ಹೇಳುತ್ತಿದ್ದರಂತೆ. ಆ ಊರಿನಲ್ಲಿ ಯಾರಾದರೂ ಯಾವಾಗಲೂ ಯೇಸುಕ್ರಿಸ್ತನ ಬಗ್ಗೆ ಮಾತಾಡುವವರಿದ್ದಾರೆಂದರೆ ಅದು ಡಿ.ಎಲ್.ಮೂಡಿ ಅವರೇ .  ಅಂಥ ಭಾರವುಳ್ಳ ಸೇವಕರು ಅವರಾಗಿದ್ದರಂತೆ ಹಾಗಾದರೆ ನಾವು ಸುವಾರ್ತೆಯನ್ನು ಹೇಳುತ್ತಿದ್ದೇವಾ ? 

ಕನಿಷ್ಠಪಕ್ಷ ನಮಗೆ ಪರಿಚಯ ಇರುವವರಿಗಾದರೂ ತಿಳಿಸಿದ್ದೇವಾ ? ಇಲ್ಲವಾದರೆ ಅವರು ಭೂಯಾತ್ರೆಯನ್ನು ಕ್ರಿಸ್ತ ನಿಲ್ಲದೆ ಮುಗಿಸುವುದರೊಳಗಾಗಿ ಅವರಿಗೆ ಕ್ರಿಸ್ತನನ್ನು ಪರಿಚಯಿಸೋಣ!!!! ಅವರ ಆತ್ಮದ ರಕ್ಷಣೆಗಾಗಿ ಪ್ರಾರ್ಥಿಸೋಣ.  ಆದುದರಿಂದ ಪ್ರಿಯ ದೇವ ಜನರೇ ನಾವು ಕೂಡ ಯೋನನ ಹಾಗೆ ನಮ್ಮನ್ನು ಸರಿಪಡಿಸಿಕೊಳ್ಳೋಣ ಕರ್ತನು ತನ್ನ ಕಾರ್ಯಕ್ಕೆ ಮತ್ತೆ ನಮ್ಮನ್ನು ಉಪಯೋಗಿಸಿಕೊಳ್ಳಲಿ ಎಂದು ಪ್ರಾರ್ಥಿಸೋಣ ಲೋಕದೊಳಗೆ ಇರುವ ದುಷ್ಟತ್ವ ಮತ್ತು ದುಷ್ಟ ಜನರನ್ನು ದೇವರು ಬದಲಾಯಿಸಲಿ ಎಂದು ಪ್ರಾರ್ಥಿಸೋಣ.  ದೇವರು ನಾವು ಧೈರ್ಯದಿಂದ ಸುವಾರ್ತೆಯನ್ನು ಸಾರಲು ನಮಗೆ ಧೈರ್ಯವನ್ನು , ಜ್ಞಾನವನ್ನು , ಬಲವನ್ನು ನೀಡಲಿ ಎಂದು ಪ್ರಾರ್ಥಿಸೋಣ  

ಆದುದರಿಂದ ಪ್ರಿಯ ದೇವ ಜನರೇ, ನಾವು ಕೂಡ

 ✔ ಯೋನನ ಹಾಗೆ ನಮ್ಮನ್ನು ಸರಿಪಡಿಸಿಕೊಳ್ಳೋಣ. 

 ✔  ಕರ್ತನು ತನ್ನ ಸೇವೆಯ ಕಾರ್ಯಕ್ಕೆ ಮತ್ತೆ ನಮ್ಮನ್ನು ಉಪಯೋಗಿಸಿಕೊಳ್ಳಲಿ ಎಂದು ಪ್ರಾರ್ಥಿಸೋಣ. 

 ✔  ಲೋಕದೊಳಗೆ ಇರುವ ದುಷ್ಟತ್ವ ಮತ್ತು ದುಷ್ಟ ಜನರನ್ನು ದೇವರು ಬದಲಾಯಿಸಲಿ ಎಂದು ಪ್ರಾರ್ಥಿಸೋಣ. 

 ✔  ನಾವು ಧೈರ್ಯದಿಂದ ಸುವಾರ್ತೆಯನ್ನು ಸಾರಲು ದೇವರು ನಮಗೆ ಜ್ಞಾನವನ್ನು ಬಲವನ್ನು ನೀಡಲಿ ಎಂದು  ಪ್ರಾರ್ಥಿಸುವ ಪ್ರಾರ್ಥಿಸೋಣ. 


 3. ಪ್ರಶ್ನಿಸುವ ದೇವರು :

ಈ ಸಂದೇಶವನ್ನು ಓದುತ್ತಿರುವ ಪ್ರಿಯ ಸೇವಕರೇ, ವಿಶ್ವಾಸಿಗಳೇ ಒಂದು ವೇಳೆ ಯೋನನ ಪುಸ್ತಕ ಬರೀ  ಮೂರನೆಯ ಅಧ್ಯಾಯಕ್ಕೆ ಮುಗಿದಿದ್ದರೆ ಯೋನನು ಒಂದು ಲಕ್ಷ ಇಪ್ಪತ್ತುಸಾವಿರ (1, 20,000) ಜನ ಅನ್ಯರಾದ ನಿನವೆಯವರ ರಕ್ಷಣೆಗೆ ಕಾರಣನಾದ ಒಬ್ಬ ಶ್ರೇಷ್ಠ ಪ್ರವಾದಿಯಾಗಿ ಕಾಣಿಸಿಕೊಳ್ಳುತ್ತಿದ್ದ.  ಆದರೆ ಯೋನನ  ನಾಲ್ಕನೇ ಅಧ್ಯಾಯ ಯೋನನ  ಆಂತರಿಕ ಮನಸ್ಸನ್ನು ಬದಲಾಯಿಸಲು ಮತ್ತು ಅದರಿಂದ ಓದುಗರಾದ ಮತ್ತು ಆತನ ಮಕ್ಕಳಾದ ನಾವು ಏನು ಕಲಿಯಬೇಕಾಗಿದೆ ಎಂದು ತಿಳಿಸಲು ಈ ಒಂದು ವಿಶೇಷ ನಾಲ್ಕನೆಯ ಅಧ್ಯಾಯವನ್ನು ದೇವರು ನಮ್ಮೆಲ್ಲರಿಗಾಗಿ ಬರೆಯಿಸಿದ್ದಾನೆ. 

★  ಅಧ್ಯಾಯ ಒಂದರಲ್ಲಿ :  ದೇವರ ಸಹನೆ ಮತ್ತು ಕಾಪಾಡುವಿಕೆ ದೇವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದರ ಬಗ್ಗೆ ಕಲಿಯುತ್ತೇವೆ. 

★ ಅಧ್ಯಾಯ ಎರಡರಲ್ಲಿ : ದೇವರ ಕ್ಷಮಾಗುಣ ದೇವರು ಕ್ಷಮಾಪಣೆ ಕೇಳುವವರನ್ನು ಕ್ಷಮಿಸುತ್ತಾನೆ ಮತ್ತು ತಿದ್ದುತ್ತಾನೆ ಎಂದು ಕಲಿಯುತ್ತೇವೆ. 

★ ಅಧ್ಯಾಯ ಮೂರರಲ್ಲಿ :  ದೇವರು ಎರಡನೇ ಅವಕಾಶ ಕೊಡುವವನು ಮತ್ತು ಎಲ್ಲಾ ಪಾಪಿಗಳನ್ನು ಕ್ಷಮಿಸಿ ರಕ್ಷಿಸುವವನು ಎಂದು ಕಲಿಯುತ್ತೇವೆ. 

 ಆದರೆ ಅಧ್ಯಾಯ 4 ರಲ್ಲಿ  ನೋಡುವುದಾದರೆ ಯೋನನ ಪುಸ್ತಕದ ಮೊದಲ ಮೂರು ಅಧ್ಯಾಯಗಳಿಂದ ಯೋನನ ಜೀವಿತದಲ್ಲಿ ನಡೆದ ಘಟನೆಗಳಿಂದ ಏನೇನು ಕಲಿತನೋ ಅದಕ್ಕಿಂತ ಹೆಚ್ಚಾಗಿ ನಾವು ಆತನ ನಾಲ್ಕನೆಯ ಅಧ್ಯಾಯದಿಂದ ಕಲಿಯಲಿದ್ದೇವೆ. 

 ಈ ಅಧ್ಯಾಯದಲ್ಲಿ ದೇವರು ಕಳೆದುಹೋದ ಪಾಪಿಗಳನ್ನು ಕರುಣಿಸುತ್ತಿದ್ದಾನೆ. ಹಾಗೆಯೇ ಕರ್ತನ ಮಕ್ಕಳಾದ ನಾವು ಕೂಡ ನಶಿಸಿಹೋಗುತ್ತಿರುವ ಆತ್ಮಗಳನ್ನು , ಪಾಪಿಗಳನ್ನು ಕರುಣಿಸಿ ಸುವಾರ್ತೆಯನ್ನು ತಿಳಿಸಿ ಅವರನ್ನು ರಕ್ಷಣೆ ಮಾರ್ಗಕ್ಕೆ ತರಬೇಕೆಂದು ಬಯಸುತ್ತಿದ್ದಾನೆ. 

 ಪ್ರಿಯರೇ ನಾವು ಓದುತ್ತಿರುವ ಸತ್ಯವೇದದಲ್ಲಿ 66 ಪುಸ್ತಕಗಳಿವೆ ಈ 66 ಪುಸ್ತಕಗಳಲ್ಲಿ ಪ್ರಶ್ನೆಯಿಂದ ಮುಕ್ತಾಯಗೊಳ್ಳುವ ಎರಡೇ ಎರಡು ಪುಸ್ತಕಗಳೆಂದರೆ ಯೋನನು ಮತ್ತು ನಹುಮನು ಮಾತ್ರವೇ . ಯೋನನ 4 ನೆಯ ಅಧ್ಯಾಯದಲ್ಲಿ ದೇವರು ಯೋನನಿಗೆ “ನೀನು ಕಷ್ಟ ಪಡದೆ ಬೆಳೆಸದೆ ಇರುವ ಒಂದು ರಾತ್ರಿ ಇದ್ದು ಇನ್ನೊಂದು ರಾತ್ರಿಯಲಿ ನಾಶವಾಗುವ ಸೂರೆ ಗಿಡಕ್ಕಾಗಿ ಕನಿಕರಪಡುವಲ್ಲಿ,  120000 ಜನರಿರುವ ನಿನೆವೆಗಾಗಿ  ನಾನು ಕನಿಕರ ಪಡಬಾರದೋ ? ಎಂದು ಪ್ರಶ್ನಿಸುತ್ತಿದ್ದಾನೆ. !!!!!! 

 ಇದೇ ರೀತಿ ದೇವರು ನಮಗೂ ಕೂಡ ಪ್ರಶ್ನಿಸುತ್ತಿದ್ದಾನೆ.  ಏನೆಂದರೆ........ 

 ಲೋಕದಲ್ಲಿರುವ ಸುಮಾರು 805 ಕೋಟಿ (8,058,947,130 as today) ಜನರನ್ನು “ನಾನು ಕರುಣಿಸಿ ಅವರಿಗೆ ಜೀವಾತ್ಮವನ್ನು ಜೀವ ಶ್ವಾಸವನ್ನು ಕೊಟ್ಟು ಪೋಷಿಸುತ್ತಿದ್ದೇನೆ(ಅರಣ್ಯಕಾಂಡ:27:16 & ಯೋಬ :34:14).  

ಹಾಗಾದರೆ ಅವರ ಆತ್ಮಗಳ ರಕ್ಷಣೆಗಾಗಿ ನೀವು ಏನು ಮಾಡುತ್ತಿದ್ದೀರಿ ? 

ನಿಮ್ಮ ದೇಶದ ರಾಜ್ಯದ,  ಜಿಲ್ಲೆಯ, ಊರಿನ ಜನರ ಆತ್ಮಗಳ ರಕ್ಷಣೆಗಾಗಿ ನೀವು ಏನು ಮಾಡುತ್ತಿದ್ದೀರಿ?

ಕನಿಷ್ಠ ಪಕ್ಷ ನಿಮ್ಮ ಮನೆಯವರ, ನೆರೆಹೊರೆಯವರ, ಸಹೋದ್ಯೋಗಿಗಳ, ಸ್ನೇಹಿತರ ಆತ್ಮಗಳ ರಕ್ಷಣೆಗಾಗಿ ಏನು ಮಾಡುತ್ತಿದ್ದೀರಿ??  ಎಂದು ಓದುತ್ತಿರುವ ನಿಮ್ಮ ನಮ್ಮೆಲ್ಲರನ್ನು ಸೃಷ್ಟಿಕರ್ತನಾದ ದೇವರು ಹಾಗೂ ನಮಗಾಗಿ ತನ್ನ ಅಮೂಲ್ಯ ರಕ್ತವನ್ನು ಕೊಟ್ಟು ನಮಗೆ ಉಚಿತ ನಿತ್ಯಜೀವವನ್ನು ನೀಡಿದ ಯೇಸು ಕ್ರಿಸ್ತನು ಪ್ರಶ್ನಿಸುತ್ತಿದ್ದಾರೆ .

ತಮ್ಮ ಜೀವಿತವನ್ನು ಸುವಾರ್ತೆ ಸೇವೆಗಾಗಿ ಮುಡಿಪಾಗಿಟ್ಟಿರುವ ಪ್ರಿಯ ಸೇವಕರಾದವರೇ ಇವತ್ತು ಒಬ್ಬರಿಗಾದರೋ ಸುವಾರ್ತೆ ಹೇಳಿದ್ದಿರೋ ? 

ಪ್ರತಿದಿನ ನಿಮ್ಮ ರಾತ್ರಿಯ ಭೋಜನಕ್ಕಿಂತ ಮುಂಚೆ ಎಷ್ಟು ಆತ್ಮಗಳನ್ನು ಸಂಪಾದಿಸಿದ್ದೇವೆ ಎಂದು ಆಲೋಚಿಸಿದ್ದಿರೋ ???

 ಈ ಪ್ರಶ್ನೆಗಳಿಗೆ ಉತ್ತರ ನಮ್ಮಲ್ಲಿದೆಯೋ ನಮ್ಮನ್ನು ನಾವು ಅವಲೋಕನ ಮಾಡಿಕೊಳ್ಳೋಣ!!!!!!!!!


ಕರ್ತನಾದ ಯೇಸುಕ್ರಿಸ್ತನು ನಮ್ಮ ಸೇವೆಗೆ ಬಲ ನೀಡಲಿ ಆಮೇನ್ .


                        

                                                                        -Bro Prabhu
Post a Comment (0)
Previous Post Next Post