ಯೇಸುಕ್ರಿಸ್ತನು ಯಾರು? - WHO IS JESUS ?

 

 ಯೇಸುಕ್ರಿಸ್ತನು ಯಾರು? - WHO IS JESUS ?

     


        ಪ್ರಿಯ ದೇವಜನರಿಗೂ ಮತ್ತು ಎಲ್ಲ ಓದುಗರಿಗೂ  ಯೇಸುಕ್ರಿಸ್ತನ ನಾಮದಲ್ಲಿ ನನ್ನ ಪ್ರೀತಿಯ ವಂದನೆಗಳು, ಮತ್ತೊಂದಾವರ್ತಿ  ನಿಮ್ಮೆಲ್ಲರನ್ನೂ "ಯೇಸು ಕ್ರಿಸ್ತನು ಯಾರು?" ಈ ಪತ್ರಿಕೆಯ ಮೂಲಕ ಸಂಧಿಸಲು ಸಹಾಯ ಮಾಡಿದ ಕರ್ತನಿಗೆ ಸ್ತೋತ್ರ ಉಂಟಾಗಲಿ.

    ✔ ಯೇಸು ಕ್ರಿಸ್ತನು ಯಾರು? 

        ಯೇಸುಕ್ರಿಸ್ತನು ದೇವರ ಮಗನು. ಸ್ವತಃ ದೇವರು ಆಗಿದ್ದಾನೆ (ಯೋಹಾನ 1:18). ಯೇಸುಕ್ರಿಸ್ತನು ನಿಮಗೆ ಗೊತ್ತಿರುವ ಕ್ರಿಸ್ತಪೂರ್ವದ ಮುಂಚಿನಿಂದಲೂ ಇದ್ದವನು ಅಂದರೆ ಭೂಮಿಯ ಯಾವ ಅಣುವಾಗಲಿ, ಸಮುದ್ರ, ಸೂರ್ಯ, ಚ೦ದ್ರ, ನಕ್ಷತ್ರಗಳಾಗಲಿ ಯಾವ ಸೃಷ್ಟಿಯಾಗಲಿ ಸೃಷ್ಟಿಯಾಗುವುದಕ್ಕಿಂತ ಮುಂಚೆ ಅನಾದಿಕಾಲದಿಂದಲೂ ಇದ್ದವನಾಗಿದ್ದಾನೆ. (ಜ್ಞಾನೊ. 8:22). ಆದರೆ ಮಾನವರಿಗಾಗಿ ದೇವರು ತನ್ನ ಎಲ್ಲ ಮಹಿಮೆಯನ್ನು , ವೈಭವವನ್ನು ಬಿಟ್ಟು ಮನುಷ್ಯರಂತೆ ರಕ್ತ ಮಾಂಸವನ್ನು ಧರಿಸಿಕೊಂಡವನಾಗಿ ಮರಿಯಳೆಂಬ ಪರಿಶುದ್ಧ ಕನೈಯಲ್ಲಿ ಯೇಸು ಎಂಬ ಹೆಸರಿನಿಂದ ಭೂಮಿಯಲ್ಲಿ ಜನಿಸಿ ಕ್ರಿಸ್ತಶಕದ ಪ್ರಾರಂಭಕ್ಕೆ ಕಾರಣನಾದನು.

 ✔ ಯೇಸು ಎಲ್ಲಿಂದ ಬಂದನು? 

        ಯೇಸುಕ್ರಿಸ್ತನು ಪರಲೋಕದಿಂದ ಅಂದರೆ ಸ್ವರ್ಗದಿಂದ ಭೂಮಿಗೆ ಬಂದನು (ಯೋಹಾನ: 6:38, 51). ಪ್ರಿಯರೇ ಲೋಕದಲ್ಲಿ ಮೇಧಾವಿಗಳು, ಮಹಾತ್ಮರು ಎಣಿಸಿಕೊಂಡ ಮನುಷ್ಯರು ದೇವರೆಂದು ಕರೆಸಿಯಿಕೊಂಡು, ದೇವರಾಗುವುದಕ್ಕೆ ಪ್ರಯತ್ನಿಸಿದರೂ ಸಾಧ್ಯವಾಗದೆ ಸತ್ತು ಸಮಾಧಿಯಾದರು. ಆದರೆ ಮಹಾ ಪ್ರಭಾವವುಳ್ಳ ಒಬ್ಬ ದೇವರಾದರೋ ಮಾನವರಿಗಾಗಿ ತನ್ನ ಸ್ವರ್ಗದ ಮಹಿಮೆಯನ್ನು, ವೈಭವವನ್ನು, ಆರಾಧನೆಯನ್ನು ತ್ಯಜಿಸಿ ಸ್ವತಃ ಮಾನವನಾಗಿ ಜನಿಸಿ ಲೋಕದಲ್ಲಿ 33 ವರ್ಷ 6 ತಿಂಗಳು ಜೀವಿಸಿದನು.

     ಮಾನವ ಚಂದ್ರನ ಮೇಲೆ ನಡೆದು ಬಂದದ್ದು ಅದ್ಭುತವಲ್ಲ. ಅಂತಹ ಚಂದ್ರನನ್ನು, ಸೂರ್ಯ, ನಕ್ಷತ್ರ, ಗೆಲಕ್ಸಿಗಳನ್ನು, ಇಡೀ ಸಮಸ್ತ ಸೃಷ್ಟಿಯನ್ನು ನಿರ್ಮಿಸಿದ ದೇವರು ಮಾನವನ ಜ್ಞಾನಕ್ಕೂ, ಊಹೆಗೂ ನಿಲುಕದ ಸ್ವರ್ಗವನ್ನು ಬಿಟ್ಟು ನರಕಪಾತ್ರರಾದ ಮಾನವರಿರುವ ಕನಿಷ್ಟ ಲೋಕಕ್ಕೆ ಇಳಿದು ಬಂದು ಭೂಮಿಯ ಮೇಲೆ ನಡೆದಾಡಿದ್ದು ಎಲ್ಲ ಅದ್ಭುತಕ್ಕಿಂತ ಶ್ರೇಷ್ಟ ಅದ್ಭುತ ಮತ್ತು ಆಶ್ಚರ್ಯವಾಗಿದೆ. 

        ಹಾಗಾದರೆ ಪ್ರಿಯರೇ ಯೇಸುಕ್ರಿಸ್ತನು ಏಕೆ ಬಂದನು?

1) ಸ್ವರ್ಗದ ಮಾರ್ಗವನ್ನು ನಮಗೆ ತೋರಿಸಲು (ಯೋಹಾನ 14:6)

        ದೇವಜನರೇ, ಲೋಕದ ಬಹಳಷ್ಟು ಜನರು ಸ್ವರ್ಗ ಲೋಕವನ್ನು, ಅಲ್ಲಿರುವ ದೇವರನ್ನು ನೋಡಲು ಮತ್ತು ಅಲ್ಲಿಗೆ ಹೋಗುವ ಮಾರ್ಗವನ್ನು ಕಂಡು ಹಿಡಿಯಲು ಪ್ರಯತ್ನಿಸಿದರೂ ಒಬ್ಬರಿಂದಲೂ ಸಾಧ್ಯವಾಗಲೇ ಇಲ್ಲ , ಆದ್ದರಿಂದ ಸ್ವತಃ ಸ್ವರ್ಗದ ದೇವರು ಯೇಸು ಎಂಬ ಹೆಸರಿನಿಂದ ಮಾನವನಾಗಿ ಜನಿಸಿ ಸ್ವರ್ಗಕ್ಕೆ ಹೋಗುವ ಮಾರ್ಗವನ್ನು ತೋರಿಸಲು ಮತ್ತು ಅಗಮ್ಯ ಬೆಳಕಿನಲ್ಲಿ ವಾಸಮಾಡುವ ದೇವರನ್ನು ಪ್ರಕಟಿಪಡಿಸಲು ತಾನೇ ಮಾರ್ಗವಾಗಿ ಬಂದನು (ಯೋಹಾನ 14:6).

2) ವೈರಿಯಿಂದ ನಮ್ಮನ್ನು ಬಿಡಿಸಲು (ಇಬ್ರಿಯ 2:14):

    ದೇವರ ವೈರಿಯಾದ ಸೈತಾನನಿಂದ ಮತ್ತು ಆತನಿಗಾಗಿ ಸಿದ್ಧ ಮಾಡಲ್ಪಟ್ಟಿರುವ ನರಕದಿಂದ ನಮ್ಮನ್ನು ಬಿಡಿಸಲು ಯೇಸುಕ್ರಿಸ್ತನು ಬಂದನು. ಸೈತಾನನ ಅಂಧಕಾರದ ಲೋಕದಿಂದ ನಮ್ಮನ್ನು ಬಿಡಿಸಲು ಯೇಸು ಬಂದನು (ಇಬ್ರಿಯ 2:14). 3). 

3)  ಸೆರೆಮನೆಯಿಂದ ನಮ್ಮನ್ನು ಬಿಡಿಸಲು (ಇಬ್ರಿಯ 2:15):

        ಜೀವಮಾನವೆಲ್ಲಾ ತಮ್ಮ ಮರಣ ಭಯದ ದೆಸೆಯಿಂದ ಸೈತಾನನ ದಾಸತ್ವದೊಳಗಿದ್ದವರನ್ನು ಬಿಡಿಸಲು ಯೇಸು ಬಂದನು. ಲೋಕದ ಜನರು ತಾವು ಸತ್ತರೆ ಮುಂದೆ ನಮಗೆ ಜೀವಿಸಲು ಸಾಧ್ಯವಿಲ್ಲ ಎಂಬ ಭಯದಿಂದ ಜೀವಿಸುತ್ತಾರೆ. ಹೌದು, ಹುಟ್ಟಿದ ಪ್ರತಿಯೊಬ್ಬರು ಸಾಯಲೇಬೇಕು ಮತ್ತು ಸಾಯುತ್ತಾರೆ. ಆದರೆ ಕೆಲವರು ಯೇಸುವನ್ನು ನಂಬಿ ಸತ್ತಮೇಲೂ ಜೀವಿಸುತ್ತಾರೆ. ಏಕೆಂದರೆ ಯೇಸುಕ್ರಿಸ್ತನು ಮರಣದ ಭಯದಿಂದ ನಮ್ಮನ್ನು ಬಿಡಿಸಿದ್ದಾನೆ. ಹೇಗೆಂದರೆ ಯೇಸು ಮರಣವನ್ನು ಅನುಭವಿಸಿದನು, ಮರಣವನ್ನು ದಾಟಿದನು. ಕಡೆಗೆ ಮರಣವನ್ನು ಜಯಿಸಿದನು. ಆದ್ದರಿಂದಲೇ ಆತನು ತನ್ನನ್ನು ನಂಬಿದವರಿಗೆ “ನಾನು ಬದುಕುವುದರಿಂದ ನೀವೂ ಬದುಕುವಿರಿ” ಎಂದು ಹೇಳಿದ್ದಾನೆ (ಯೋಹಾನ 14:19). ಆತನು ಈಗಲೂ ಜೀವಿಸುವ ದೇವರಾಗಿದ್ದಾನೆ. ಆತನನ್ನು ನಂಬಿ ರಕ್ಷಣೆ ಹೊಂದಿದ ಪ್ರತಿಯೊಬ್ಬನು ನಿತ್ಯಕಾಲಕ್ಕೂ ನಿತ್ಯ ಜೀವವನ್ನು ಹೊಂದಿ ಜೀವಿಸುವವನಾಗಿದ್ದಾನೆ (ಯೋಹಾನ : 3:16).

4) ನಮ್ಮ ಬಲಹೀನತೆಯಲ್ಲಿ ನಮಗೆ ಸಹಾಯ ಮಾಡಲು(ಇಬ್ರಿಯ : 2:16-18).

        ಯೇಸುಕ್ರಿಸ್ತನು ಮನುಷ್ಯರ ಶರೀರದ ಬಲಹೀನತೆಗಳನ್ನು ಅರಿಯಲು ಮನುಷ್ಯನಾದನು. ಅಂದರೆ ಯೇಸು ಕೂಡ ನಮ್ಮ ಹಾಗೆ ಎಲ್ಲ ಕಷ್ಟಗಳನ್ನು ಶರೀರದಲ್ಲಿ ಅನುಭವಿಸಿದನು. ಆತನು ಕೂಡ ನಮ್ಮ ಹಾಗೆ ನೀರಡಿಕೆಯನ್ನು (ಯೋಹಾನ 19:28), ಹಸಿವೆಯನ್ನು (ಮಾರ್ಕ, 11:12, ಮತ್ತಾ. 4:2), ದುಃಖವನ್ನು (ಯೋಹಾನ 11:33-35, ಮತ್ತಾ. 26:38), ಹಿಂಸೆಯನ್ನು (ಮತ್ತಾಯ 26:67, 68, 27:26), ಪೆಟ್ಟುಗಳನ್ನು (ಮತ್ತಾಯ. 26:67), ಗಾಯಗಳನ್ನು (ಯೇಶಾಯ :53:5), ನಂಬಿಕೆ ದ್ರೋಹವನ್ನು (ಯೂದನು, ಮತ್ತಾಯ 26:25, 47-51), ಸುಳ್ಳು ಅಪರಾಧವನ್ನು (ಮತ್ತಾ.27:37, ಅ.ಕೃ. 13:27), ಅವಮಾನವನ್ನು (ಇಬ್ರಿಯ: 12:2), ವಿರೋಧವನ್ನು (ಇಬ್ರಿಯ 12:3). ಕೊನೆಗೆ ಕ್ರೂರ ಮರಣವನ್ನು (ರೋಮ. 8:34, ಫಿಲಿ.3:10) ತನ್ನ ಶರೀರದಲ್ಲಿ ಅನುಭವಿಸಿದನು. ಆದರೆ ಇಂಥ ಎಲ್ಲ ಶೋಧನೆಗಳನ್ನು ಅನುಭವಿಸಿದರೂ ಪಾಪ ಮಾತ್ರ ಮಾಡಲಿಲ್ಲ (ಇಬ್ರಿಯ, 4:15, 1 ಪೇತ್ರ 2:21). 



        ಇಂತಹ ಯೇಸುಕ್ರಿಸ್ತನ ಜೀವತವೇ ಆತನನ್ನು ಬೇರೆ ಎಲ್ಲ ಧರ್ಮಗಳಲ್ಲಿರುವ ದೇವರೆನಿಸಿಕೊಂಡವರಿಂದಲೂ/ಮಹಾತ್ಮರೆನಿಸಿಕೊಂಡವರಿಂದಲೂ/ಪವಾಡ ಪುರುಷರೆನಿಸಿಕೊಂಡವರಿಂದಲೂ  ಆತನನ್ನು ವಿಭಿನ್ನವಾಗಿ ಪ್ರಕಟಿಸುವಂಥದ್ದಾಗಿದೆ. ಈ ಕಾರಣದಿಂದಲೇ ನಾವುಗಳು ಅಂದರೆ  ಮನುಷ್ಯರು ಪ್ರಾರ್ಥಿಸುವಾಗ, ತಮ್ಮ ತಮ್ಮ ಸಮಸ್ಯೆಗಳನ್ನು ಹೇಳುವಾಗ ಕ್ರಿಸ್ತ ಯೇಸು ಒಬ್ಬನೆ “ನಾನು ಕೂಡ ನಿಮ್ಮಂಥ ಎಲ್ಲ ಕಷ್ಟಗಳನ್ನು ಅನುಭವಿಸಿ ಬಂದಿದ್ದೇನೆ” ಎಂದು ಹೇಳಲು ಸಾಧ್ಯವೇ ಹೊರತು ಬೇರೆ ಯಾರಿಗೂ ಸಾಧ್ಯವಿಲ್ಲ. ಈ ಕಾರಣದಿಂದಲೇ ಆತನು ಮನುಷ್ಯನಾಗಿ ಬಂದನು. ಲೋಕದಲ್ಲಿರುವ ನಾವು ಮತ್ತು ಎಲ್ಲ ಕ್ರೈಸ್ತರು “ಯೇಸುಕ್ರಿಸ್ತನ ಹೆಸರಿನಲ್ಲಿ” ಪ್ರಾರ್ಥಿಸುತ್ತೇವೆ. ಏಕೆಂದರೆ ಆತನು ನಮ್ಮ ಕಷ್ಟಗಳನ್ನು ತಿಳಿದಿದ್ದಾನೆ.

5) ನಮ್ಮನ್ನು ನಮ್ಮ ಪಾಪಗಳಿಂದ ಬಿಡಿಸಲು ಬಂದನು (ಯೋಹಾ:1:29) :

    ಯೇಸುಕ್ರಿಸ್ತನು ಲೋಕದ ಎಲ್ಲ ಜನರ ಪಾಪ ವಿಮೋಚನೆಗಾಗಿ ಬಂದನು (1 ತಿಮೋಥಿ: 1:15) ಮತ್ತು ಮಾನವರಿಗಾಗಿ ಆತನು ತನ್ನ ದೇಹವನ್ನು ಸಮರ್ಪಿಸಿ ಕಲ್ವಾರಿ ಶಿಲುಬೆಯ ಮೇಲೆ ತನ್ನ ಪರಿಶುದ್ಧ ರಕ್ತವನ್ನು ಸುರಿಸಿದನು. ಹೀಗೆ ಯೇಸು ತನ್ನ ಸ್ವ ರಕ್ತದಿಂದ ಸಭೆಯನ್ನು ಸಂಪಾದಿಸಿಕೊಳ್ಳಲು ಲೋಕಕ್ಕೆ ಬಂದನು (ಅ.ಕೃ. 20:28).

 6) ನಮಗೆ ನಿತ್ಯಜೀವವನ್ನು ಕೊಡಲು ಬಂದನು (ಯೋಹಾನ:3:16)

        ಲೋಕದ ಜನರನ್ನು ನಿತ್ಯನಾಶನದಿಂದ ಅಂದರೆ ನರಕದಿಂದ, ಪಾಪದ ಸಂಬಳದಿಂದ, ಮರಣದಿಂದ ಬಿಡಿಸಲು ಯೇಸು ಲೋಕಕ್ಕೆ ಬಂದನು. ಯಾರಾರು ಯೇಸುಕ್ರಿಸ್ತನನ್ನು ನಂಬಿ ಪಾಪ ಕ್ಷಮಾಪಣೆಯನ್ನು ಹೊಂದುತ್ತಾರೊ ಅವರೆಲ್ಲರಿಗೂ ನಿತ್ಯಜೀವವನ್ನು ಕೊಡಬೇಕೆಂದು ಆತನು ಲೋಕಕ್ಕೆ ಬಂದನು.

 “ಯೇಸು ಕ್ರಿಸ್ತನು ಮನುಷ್ಯನಾಗಿ ಜನಿಸಿದನು, ಏಕೆಂದರೆ ನಾವು ಆತ್ಮೀಕವಾಗಿ ಜನಿಸಬೇಕೆಂದು”

“ಯೇಸು ಭೂಲೋಕದ ಮಾನವ ತಾಯಿಯನ್ನು ಪಡೆದನು, ಏಕೆಂದರೆ ನಾವು ಪರಲೋಕದ ದೇವರನ್ನು ತಂದೆಯಾಗಿ ಪಡೆಯಲು.”

“ಯೇಸು ಬಡವನಾಗಿ ಜನಿಸಿದನು ಏಕೆಂದರೆ ನಾವು ಕ್ರಿಸ್ತನಲ್ಲಿ ಐಶ್ವರ್ಯವಂತರಾಗಲೆಂದು.”

“ಯೇಸು ಜನಿಸಿದಾಗ ಲೋಕದ ಕುರುಬರಿ೦ದ ಸ್ವಾಗತಿಸಲ್ಪಟ್ಟನು. ಏಕೆಂದರೆ ನಾವು ಆತ್ಮೀಕವಾಗಿ ಜನಿಸುವಾಗ ಪರಲೋಕದ ದೇವದೂತರಿಂದ ಸ್ವಾಗತಿಸಲ್ಪಟ್ಟು ಸಂಭ್ರಮಿಸಲ್ಪಡಲೆಂದು “.



            ಪ್ರಿಯ ಓದುಗರೇ ಒಂದು ವೇಳೆ ನೀವು ಯೇಸುಕ್ರಿಸ್ತನ ಬಗ್ಗೆ ತಿಳಿಯದ ಕ್ರಿಸ್‌ಮಸ್‌ ಆಚರಿಸುವವರಾಗಿದ್ದರೆ ಮೊದಲು ಆತನ ಬಗ್ಗೆ ತಿಳಿಯುವುದು ಬಹಳ ಮುಖ್ಯವಾಗಿದೆ. ಇಲ್ಲವಾದರೆ ನಿಮ್ಮ ಸಂಭ್ರಮಾಚಾರಣೆ ವ್ಯರ್ಥವಾಗಿದೆಯಷ್ಟೆ, ನಿಜವಾದ ಕ್ರಿಸ್‌ಮಸ್ “ಯೇಸು ಯಾರು? ಆತನು ಏಕೆ ಲೋಕಕ್ಕೆ ಬಂದನು ಎಂದು ತಿಳಿದು ಆತನಿಂದ ನಿತ್ಯಜೀವವನ್ನು ಹೊಂದಿ ಆತನಿಗಾಗಿ ಜೀವಿಸುವುದೇ” ಆಗಿದೆ. ನೀವು ಇನ್ನೂ ಆತನನ್ನು ನಿಮ್ಮ ಹೃದಯದಲ್ಲಿ ಬರಮಾಡಿಕೊಳ್ಳದೆ ಬರೀ ಆತನ ಕ್ರಿಸ್‌ಮಸ್ ಆಚರಣೆ ಮಾಡುವವರಾಗಿದ್ದರೆ ಈ ಹೊತ್ತೇ ಆತನನ್ನು ತಿಳಿದುಕೊಳ್ಳಿರಿ. ಏಕೆಂದರೆ “ಯೇಸುಕ್ರಿಸ್ತನನ್ನು ತಿಳಿಯುವುದೇ ನಿತ್ಯಜೀವವಾಗಿದೆ.” (ಯೋಹಾನ 17:3), ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ, 

ಆಮೇನ್.


                                                                                                            By - Prabhu





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು