ಸ್ವರ್ಗೀಯ ತಂದೆ ಹಾಗು ಲೋಕದ ತಂದೆಯ (heavenly father and earthly father)

 

ಸ್ವರ್ಗೀಯ ತಂದೆ ಹಾಗು ಲೋಕದ ತಂದೆಯ





        ಪ್ರಿಯ ಓದುಗರಿಗೆ ಯೇಸುಕ್ರಿಸ್ತನ ದಿವ್ಯನಾಮದಲ್ಲಿ ವಂದಿಸುತ್ತೇನೆ . ಈ ಸಂದೇಶದಲ್ಲಿ ನಮ್ಮ ಸ್ವರ್ಗೀಯ ತಂದೆ ಹಾಗು ಲೋಕದ ತಂದೆಯ ಗುಣಗಳನ್ನು ನೋಡೋಣ . 

1. ಪ್ರೀತಿ ಮತ್ತು ಕರುಣೆವುಳ್ಳ ತಂದೆ :  ನಾವು ಸತ್ಯವೇದದಲ್ಲಿ ಅನೇಕ ತಂದೆಯಂದಿರ ಕರ್ತವ್ಯಗಳ ಕುರಿತಾಗಿ ಓದುತ್ತೇವೆ ಅವುಗಳಲ್ಲಿ ನಾವು ನೋಡುವಂತೆ ಅನೇಕ ವಿಷಯಗಳಲ್ಲಿ ತಂದೆಯಾದ ದೇವರು ಸ್ವತಃ  ಹೇಳುವಂತ ಮಾತುಗಳು “ ತಂದೆಯು ಮಕ್ಕಳನ್ನು ಕನಿಕರಿಸುವಂತೆ

ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ”.(ಕೀರ್ತನೆ :103:13) ಎಂದು .ಪ್ರಿಯರೆ ನಮ್ಮ ಲೋಕದ ತಂದೆ ಯಾವಾಗಲು ನಮ್ಮನು ಕನಿಕರಿಸಿ ನಮ್ಮ ಕಾಳಜಿ ಮಾಡುತ್ತಾರೆ ಹಾಗೆಯೆ ಸ್ವತಃ ಸೃಷ್ಠಿ ಕರ್ತನಾದ ದೇವರು ತಂದೆಯ ಹಾಗೆಯೆ ನಮ್ಮ ಆತ್ಮಗಳನ್ನು ಕನಿಕರಿಸಿ ಕಾಳಜಿ ಮಾಡುವವನಾಗಿದ್ದಾನೆ . 

2. ತಿದ್ದಿ ನಡೆಸುವ ತಂದೆ : ಮಕ್ಕಳು ತಪ್ಪು ಮಾಡುವುದು ಸಹಜ ಆದರೆ ಅದನ್ನು ಪರಿಶೀಲಿಸಿ ತಿದ್ದಿ ಶಿಕ್ಷಿಸಿ ಸರಿದಾರಿಗೆ ತರುವುದು ಪ್ರತಿಯೊಬ್ಬ ತಂದೆಯ ಮೊದಲ ಕರ್ತವ್ಯ . ವಾಕ್ಯದಲ್ಲಿ ನಾವು ನೋಡುವಂತೆ  “ಮಗನೇ, ಯೆಹೋವನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ.

ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ;

.  ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ

ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ“ (ಜ್ಞಾನೋಕ್ತಿ : 3:11-12). ಪ್ರಿಯರೆ ನಾವು ಲೋಕದ ತಂದೆಯರನ್ನು ನೋಡಿದರೆ ಅವರು ತಮ್ಮ ಮಕ್ಕಳನ್ನು ಪ್ರೀತಿಯಿಂದ  ತಿದ್ದುವುದು ಅತ್ಯಗತ್ಯವಾಗಿದೆ . ಯಾವ ತಂದೆ ಚಿಕ್ಕ ಮಗುವಾಗಿದ್ದಾಗ ತಪ್ಪನ್ನು ಶಿಕ್ಷಿಸಿ ತಿದ್ದಿ ಸರಿಪಡಿಸದೆ ಹೋದರೆ ಮುಂದೊಂದು ದಿನ ಅದೇ ಮಗನು ತಂದೆ ಅಷ್ಟೇ ಅಲ್ಲ ಯಾವ ವ್ಯಕ್ತಿ ಹೇಳಿದರೂ ಕೂಡ ಕೇಳದ ಮೊಂಡ ಮಗನಾಗುತ್ತಾನೆ .” ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ “ . 

 ಆದರೆ ನಮ್ಮ ದೇವರೋ ಹಾಗಲ್ಲ ನಮ್ಮನ್ನು ಪ್ರೀತಿಯಿಂದ  ಶಿಕ್ಷಿಸಿ ಸರಿಪಡಿಸದ ಹೊರತು ನಮ್ಮನ್ನು ಬಿಡುವುದಿಲ್ಲ . 


3. ಪೂರೈಸುವ ಮತ್ತು ಕಾಪಾಡುವ ತಂದೆ : ನಮ್ಮ ತಂದೆ ನಮಗೆ ಅವಶ್ಯವಿರುವ ಸಂಗತಿಗಳನ್ನು ನಮಗೆ ಕೊಟ್ಟು  ನಮ್ಮನು ಕೇಡುಗಳಿಂದ ಕಾಪಾಡುತ್ತಾನೆ ಹಾಗೆಯೆ ನಮ್ಮ  ಯೇಸು ಕ್ರಿಸ್ತನು ಹೊಸ ಒಡಂಬಡಿಕೆಯಲ್ಲಿ ಹೇಳುವಂತೆ ತಂದೆಯಾದ ದೇವರು ನಮ್ಮ ಅಗತ್ಯತೆಗಳನ್ನು ಪೂರೈಸುವುದರ ಕುರಿತು ಮಾತಾಡುತ್ತಾನೆ . “ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ?”

 ಅಂದರೆ ನಮ್ಮ ಲೋಕದ ತಂದೆ ತನಗೆ ಸಾಧ್ಯವಾದಷ್ಟು ತನ್ನ ಮಕ್ಕಳಿಗೆ  ಕೊಟ್ಟು ಅವರನ್ನು  ಕಾಪಾಡುವಾಗ ಇನ್ನು ನಮ್ಮ ಪಾಪದ ವಿಮೋಚನೆಗೆ ತನ್ನ ಏಕ ಮಾತ್ರ ಪುತ್ರನಾದ ಯೇಸುಕ್ರಿಸ್ತನನ್ನೇ ಕೊಟ್ಟಿರುವಾಗ ಇನ್ನು ಉಳಿದ ಸಂಗತಿಗಳನ್ನು ಕೊಡಲಾರದೆ ಇರುವನೇ ? 

“ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ; ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ?(ರೋಮ : 8:32)

4. ಮಾರ್ಗದರ್ಶನ ಮತ್ತು ಬುದ್ದಿ ಕಲಿಸುವ ತಂದೆ : ನಮ್ಮ ಲೋಕದ ತಂದೆ ನಾವು ಎಡವುವಾಗ ನಮಗೆ ತಿಳಿಯದೆ ಇರುವ ಸಂಗತಿಗಳಲ್ಲಿ ನಮಗೆ ಮಾರ್ಗದರ್ಶನ ನೀಡಿ ನಮಗೆ ತಿಳಿ ಹೇಳಿ ನಮಗೆ ಬುದ್ಧಿಹೇಳುತ್ತಾರೆ . ನಮ್ಮ ಪರಲೋಕದ ತಂದೆಯಾದರೋ ಸಕಲ ಜ್ಞಾನವು ಆತನಲ್ಲಿರುವಾಗ ನಮಗೆ ಕಷ್ಟದ ಸಮಯದಲ್ಲಿ ವಾಕ್ಯದಿಂದ , ಪವಿತ್ರಾತ್ಮನಿಂದ , ಸೇವಕರಿಂದ ನಮಗೆ ಮಾರ್ಗದರ್ಶನ ನೀಡಿ ಶ್ರೇಷ್ಠ ಜ್ಞಾನದಿಂದ ನಮ್ಮನು ನಡೆಸುತ್ತಾರೆ . “ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ  ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ.” (ಯಾಕೋಬ : 1:5). 

5. ಏನನ್ನು ಮಕ್ಕಳಿಂದ ಅಪೇಕ್ಷಿಸದ ತಂದೆ (Unconditional Love ) : ಈಗಿನ ದಿನಗಳಲ್ಲಂತೂ ಮಕ್ಕಳು ತಂದೆಗೆ ಕೊಡಬೇಕಾದ ಸಾಮಾನ್ಯ ಅವಶ್ಯಕತೆಗಳನ್ನು ನೀಡುತ್ತಿಲ್ಲ . ತಮ್ಮ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ . ಹುಟ್ಟಿಸಿದ ತಂದೆಯಾದರೋ ತಮ್ಮ ಮಕ್ಕಳು ವಿದ್ಯಾವಂತರಾಗಲಿ , ಒಳ್ಳೆಯ ಉದ್ಯೋಗ ಹಿಡಿಯಲಿ ಎಂದು ಕಷ್ಟಪಟ್ಟು ದುಡಿದು ತಮ್ಮ ಜೀವವನ್ನು ತ್ಯಾಗ ಮಾಡಿದರೆ ಅದೇ ಉದ್ಯೋಗ ಹಿಡಿಯುವ ಮಕ್ಕಳೋ ತಮ್ಮ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದಾರೆ . ಯಾವ ತಂದೆ ತಮ್ಮ ಮಕ್ಕಳು  ಮಗುವಾಗಿದ್ದಾಗ ಎತ್ತಿ ಆಡಿಸಿ , ಹೊತ್ತು ನಡೆದಾರೋ ಅದೇ ಮಗನು ದೊಡ್ಡವನಾಗಿ ಅವರಿಗೆ ಒಂದು ಹೊತ್ತಿನ ಊಟವನ್ನು ಕೊಡದೆ , ಸರಿಯಾಗಿ ಮಾತನಾಡಿಸದೆ , ಅವರೊಂದಿಗೆ ಸಮಯ ಕಳೆಯದೆ ಅವರನ್ನು ನೋಯಿಸುತ್ತಿದ್ದಾನೆ . ಪ್ರಿಯರೆ ಇದು ಲೋಕದ ತಂದೆಯ ಸಂಗತಿಯಾದರೆ ಇನ್ನು ನಾವಾದರೋ ನಮ್ಮ ಆತ್ಮಕ್ಕೆ ತಂದೆಯು ನಮ್ಮ ಸೃಷ್ಟಿಕರ್ತನು ಆದ ನಿಜ ದೇವರನ್ನು ಮರೆತು ಆತನಿಂದ ದೂರವಾಗಿದ್ದೇವೆ . ಸತ್ಯದೇವರನ್ನು ಅರಿಯದೆ ನಮಗೆ ಇಷ್ಟವಾದ ನಮ್ಮ ಕಲ್ಪನೆಗೆ ಸರಿತೋಚುವ ವಿಗ್ರಹಗಳನ್ನು ಮಾಡಿ ನಮಿಸುತ್ತಿದ್ದೇವೆ . ನಾವು ತಿರಿಗಿ ನಿಜವಾದ ತಂದೆ ನಮ್ಮ ಆತ್ಮದ ಒಡೆಯನನ್ನು ತಿಳಿಯುವುದು ಅತ್ಯವಶ್ಯವಾಗಿದೆ . 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು