Father's Day - ಫಾದರ್ಸ ಡೇ ( KANNADA SERMON)

 Father's Day -  ಫಾದರ್ಸ ಡೇ ( KANNADA SERMON)





ಕರ್ತವಲ್ಲಿ ಪ್ರಿಯ ದೇವ ಜನರೇ ಇವತ್ತು ನಾವು ತಂದೆಯಂದಿರ ವಿಶೇಷ ದಿನದ ಕುರಿತಾಗಿ ಕರ್ತನ ಸತ್ಯವೇದದಲ್ಲಿ ಹೇಳಲಾದ ಅನೇಕ ಸತ್ಯ ಸಂಗತಿಗಳನ್ನು ಹಾಗೂ ತಂದೆಯಂದಿರು ಮಕ್ಕಳ ವಿಷಯದಲ್ಲಿ ಅವರಿಗೆ ಇರಬೇಕಾದ ಗುಣಗಳು ಹಾಗೂ ಮಕ್ಕಳು ತಂದೆಯೊಂದಿಗೆ ನಡೆದುಕೊಳ್ಳಬೇಕಾದ ರೀತಿ ಹಾಗೂ ಮಕ್ಕಳು ತಂದೆಗೆ ಯಾವ ವಿಷಯಗಳಲ್ಲಿ ಗೌರವವನ್ನು, ಮಾನವನ್ನು , ಸನ್ಮಾನವನ್ನು ಮಾಡಬೇಕು ಎಂಬುದನ್ನು ಈ ಸಂದೇಶದಲ್ಲಿ ನೋಡೋಣ . 


ಪ್ರೀತಿಯ ಸಹೋದರರೇ ಈ ದಿನ father’s Day ಎಂಬುದು ಎಲ್ಲರಿಗೂ ಗೊತ್ತು ಆದರೆ ನಾವು ನಮ್ಮ ತಂದೆಗೆ ಯಾವ್ಯಾವ ವಿಷಯಗಳಲ್ಲಿ ಅವರನ್ನು ಸನ್ಮಾನಿಸುತ್ತಿದ್ದೇವೆ ಎಂದು ಈ ಸಂದೇಶದ ಮೂಲಕ ತಿಳಿಯೋಣ . 


👉 ತಂದೆಯಾದ ದೇವರು ಎಂಥವನಾಗಿದ್ದಾನೆ ?


🌟 ಕನಿಕರವುಳ್ಳ ತಂದೆ :  2 ಕೊರಿಂಥ : 1:3 ಲೂಕ : 6:36


🌟 ಸಂತೈಸುವ ತಂದೆ 2 ಕೊರಿಂಥ : 1:3


🌟 ಪ್ರೀತಿಸುವ ತಂದೆ  ಯೋಹಾನ : 3 : 16


🌟 ಪರಲೋಕದ ತಂದೆ ಮಾರ್ಕ : 11:25


🌟ಕೆಲಸ ಮಾಡುವ ತಂದೆ ಯೋಹಾನ:5:17


🌟 ಯಾವ ದೋಷವಿಲ್ಲದ ತಂದೆ ಮತ್ತಾಯ : 5:48


🌟 ಕಲಿಸುವ ತಂದೆ ಯೋಹಾನ : 5:19-22


🌟 ಕ್ಷಮಿಸುವ ತಂದೆ ಮತ್ತಾಯ : 6:15



➤    ಪ್ರತಿಯೊಬ್ಬ ತಂದೆಯು ಮಕ್ಕಳಿಗೆ ಮಾಡಬೇಕಾದ         ಕರ್ತವ್ಯವೇನು  ?


👪 ಮೊದಲ ಶಿಕ್ಷಕರಾಗುವ ತಂದೆ  (ಜ್ಞಾನೋಕ್ತಿ 22:6)


"ಮಗುವಿಗೆ ಮಗ /ಮಗಳು ಅವರು ನಡೆಯಬೇಕಾದ  ರೀತಿಯಲ್ಲಿ ಬೆಳೆಸುವುದು " ನಮ್ಮ ಜವಾಬ್ದಾರಿಯಾಗಿದೆ. ಈ ಕರ್ತವ್ಯವು ಬೇರೆಯವರದಲ್ಲ ಪ್ರತಿಯೊಬ್ಬ ಅಪ್ಪನ ಜವಾಬ್ದಾರಿಯಾಗಿದೆ . 


👪  ಸಂರಕ್ಷಿಸುವ ತಂದೆ ( 1 ತಿಮೋಥಿ  :5:8)


ಪ್ರತಿಯೊಬ್ಬ ತಂದೆಯು ತಮ್ಮ ಕುಟುಂಬವನ್ನು ಸಂರಕ್ಷಿಸುವುದು ಮೊದಲ ಕರ್ತವ್ಯವಾಗಿದೆ ಅಂದರೆ ಕುಟುಂಬದ ಅಗತ್ಯತೆಗಳನ್ನು , ಅವಶ್ಯವಿರುವ ಸಂಗತಿಗಳನ್ನು ಕುಟುಂಬದವರಿಗೆ ಒದಗಿಸುವುದು ಎಲ್ಲ ಅಪ್ಪಂದಿರ ಜವಾಬ್ದಾರಿಯಾಗಿದೆ . 


👪  ಮಕ್ಕಳನ್ನು ಶಿಸ್ತು ಪಡಿಸುವ ತಂದೆ ( ಜ್ಞಾನೋಕ್ತಿ : 13:24)


ನಮ್ಮ ಮಕ್ಕಳು ತಪ್ಪು ಮಾಡಿದಾಗ ಅವರನ್ನು ಶಿಕ್ಷಿಸಿ ತಿಳಿ ಹೇಳಿ ತಿದ್ದಿ ಶಿಸ್ತುಪಡಿಸುವುದು ತಂದೆಯಾದವರ ಕರ್ತವ್ಯವಾಗಿದೆ . ಇಲ್ಲವಾದರೆ ಚಿಕ್ಕ ಮಗುವಾಗಿದ್ದಾಗ ಶಿಕ್ಷಿಸಿ ತಿದ್ದಿ ಹೇಳದ ತಂದೆ ಮುಂದೊಂದು ದಿನ ತನ್ನ ಮಗ/ಮಗಳಿಗೆ ಶತ್ರುವಾಗುತ್ತಾನೆ ಎಂದು ವಾಕ್ಯವು ಹೇಳುತ್ತದೆ . 

👪  ಮಕ್ಕಳ ಜೊತೆ ಸಮಯ ಕಳೆಯುವ ತಂದೆ : 


ಧರ್ಮೋ :6:6-12-  “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. 7 ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ  ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು. 8 ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು; ಇವು ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತೆ ಇರಬೇಕು.  9 ನಿಮ್ಮ ಮನೆ ಬಾಗಲಿನ ನಿಲುವುಪಟ್ಟಿಗಳಲ್ಲಿಯೂ ತಲೆಬಾಗಲುಗಳ ಮೇಲೆಯೂ ಇವುಗಳನ್ನು ಬರೆಯಬೇಕು. 


  ಪ್ರಿಯ ದೇವಜನರೇ ಈಗಿನ ದಿನಗಳಲ್ಲಿ ಅನೇಕ ಅಪ್ಪಂದಿರು ಕೆಲಸ ಕೆಲಸ ಎಂದು ಯಾವಾಗಲು ದುಡಿಯುವದರಲ್ಲೇ ಇದ್ದು ತಮ್ಮ ಮಕ್ಕಳೊಂದಿಗೆ ಕಳೆಯಬೇಕಾದ ಅಮೂಲ್ಯ ಸಮಯವನ್ನು ಕೆಳೆದುಕೊಳ್ಳುತ್ತಾರೆ , ಹೀಗೆ ತಮ್ಮ ಅಮೂಲ್ಯ ಬಾಂಧವ್ಯದ ಬೆಸುಗೆ ತಪ್ಪಿಸಿಕೊಳ್ಳುತ್ತಾರೆ .  ತಂದೆಯಾದವರು ಹಾಗೆ ಮಾಡದೇ ತಮ್ಮ ಮಕ್ಕಳ ಜೊತೆ ಸಮಯ ಮಾಡಿಕೊಂಡು ಮಾನವೀಯ ಮೌಲ್ಯಗಳನ್ನು ತಿಳಿಸುತ್ತ ಇರೋಣ . 


👪  ಮಕ್ಕಳನ್ನು ಕನಿಕರಿಸುವ ತಂದೆ : 


ಕೀರ್ತನೆ : 103:13 - “ ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ.” 


👪  ಬಾಲೋಪದೇಶ ಮಾಡುವ ತಂದೆ : 


ಎಫೇಸ : - 6:4 - ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿ ಸಲಹಿರಿ. ಮಕ್ಕಳಿಗೆ ನೀತಿ ಪಾಠಗಳನ್ನು ಕಲಿಸಬೇಕಾದದ್ದು ಬರಿ ತಾಯಿ ಮಾತ್ರವೇ ಅಲ್ಲ , ಅಪ್ಪನು ಕೂಡ ಕರ್ತನ ಚಿತ್ತವನ್ನು ತಿಳಿಸುವ ಉಪದೇಶ ಮಾಡುವುದು ಅವಶ್ಯವಾಗಿದೆ . ಇದನ್ನು ಮಾಡಲು ಮೊದಲು ಅಪ್ಪಂದಿರು ಕರ್ತನ ಚಿತ್ತವನ್ನು ಅರಿತಿರಬೇಕು . 


👪  ಮಾದರಿ ತಂದೆ : 


ಭಕ್ತನಾದ ಯೋಬನ ಬಗ್ಗೆ ನೋಡುವಾಗ ಆತ ತನ್ನ ಪ್ರತಿಯೊಬ್ಬ ಮಕ್ಕಳಿಗೋಸ್ಕರ ಯಜ್ಞವನ್ನು ಕ್ರಮವಾಗಿ ಅರ್ಪಿಸುತ್ತಿದ್ದನು ಯಾಕೆಂದರೆ ಅವನಿಗೆ ಅವನ ಮಕ್ಕಳು ಪರಿಶುದ್ದರಾಗಿ ಇರಬೇಕೆಂದು , ಒಂದು ವೇಳೆ ಅವನ ಮಕ್ಕಳು ಹೃದಯದಲ್ಲಿ ಏನಾದರೂ ಪಾಪ ಮಾಡಿದ್ದಾರೆ ದೇವರು ಅವರನ್ನು ಕ್ಷಮಿಸಲಿ ಎಂದು, ತನ್ನ  ಮಕ್ಕಳಿಗಾಗಿ ಪ್ರಾರ್ಥಿಸುವ ತಂದೆಯಾಗಿದ್ದನು . ನಾವು ನಮ್ಮ ಮಕ್ಕಳ ಜೀವಿತದ ಕುರಿತು, ಅವರು ಹೇಗೆ ಜೀವಿಸುತ್ತಿದ್ದಾರೆ ಎಂಬ ಆಲೋಚನೆ , ಕಾಳಜಿ ಇದೆಯೋ ? 


👉 ಪ್ರತಿ ತಂದೆಗೆ ಮಕ್ಕಳು ಮಾಡಬೇಕಾದ ಕರ್ತವ್ಯ 


👦 ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸಬೇಕು. ( ವಿಮೋ : 20:12 )


ಇದು ದೇವರು ಕೊಟ್ಟ ದಶಾಜ್ಞೆಗಳಲ್ಲಿ 5 ನೇ ದಶಾಜ್ಞೆಯಾಗಿದೆ. 


👦 ತಂದೆ ತಾಯಿಗಳಿಗೆ ವಿದೇಯರಾಗಬೇಕು. 


( ವಿಮೋ : 21:15 ) ತಂದೆಯನ್ನಾಗಲಿ ತಾಯಿಯನ್ನಾಗಲಿ ಹೊಡೆದವನಿಗೆ ಮರಣಶಿಕ್ಷೆಯಾಗಬೇಕು. 


(  ವಿಮೋ :  21:17  )  ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣಶಿಕ್ಷೆಯಾಗಬೇಕು. 


👦 ಪ್ರತಿಯೊಬ್ಬನು ತನ್ನ ತಾಯಿತಂದೆಗಳ ವಿಷಯದಲ್ಲಿ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ( ಯಾಜಕ : 19:03 )


ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣಶಿಕ್ಷೆಯಾಗಬೇಕು. 


👦 ಮಕ್ಕಳು , ಎಲ್ಲಾ ವಿಷಯಗಳಲ್ಲಿ ತಮ್ಮ ತಂದೆ ತಾಯಿಗಳ ಮಾತು ಕೇಳಬೇಕು ಯಾಕೆಂದರೆ ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ . (ಕೊಲೊ : 3:20-21)


 ಪ್ರಿಯರೆ ನಾವು ನಮ್ಮ ತಂದೆ ತಾಯಿಗೆ ಪ್ರತಿಯೊಂದು ವಿಷಯದಲ್ಲಿ ಅವರ ಸಲಹೆ , ಅವರ ಒಪ್ಪಿಗೆಯನ್ನು ಕೇಳಿತ್ತಿದ್ದೆವೋ ? 


ಸ್ತ್ರೀಯು ಕನ್ಯಾವಸ್ಥೆಯಲ್ಲಿ ತಂದೆಯ ಮನೆಯಲ್ಲಿದ್ದು ಯೆಹೋವನಿಗೆ ಹರಕೆಯನ್ನು ಮಾಡಿದಾಗ ಇಲ್ಲವೆ ಯಾವದಾದರೂ ಒಂದನ್ನು ಮುಟ್ಟದೆ ಇರುವೆನೆಂದು ಪ್ರತಿಜ್ಞೆಯನ್ನು ಮಾಡಿಕೊಂಡಾಗ  ಅವಳ ತಂದೆಯು ಆ ಸಂಗತಿಯನ್ನು ತಿಳಿದು ಸುಮ್ಮನಿದ್ದರೆ ಅವಳು ಆ ಹರಕೆಯನ್ನು ನೆರವೇರಿಸಲೇಬೇಕು; ಯಾವದನ್ನು ಮುಟ್ಟದೆ ಇರುವೆನೆಂದು ಹೇಳಿದಳೋ ಅದನ್ನು ಮುಟ್ಟಲೇಬಾರದು.  ಆದರೆ ತಂದೆ ಆ ಸಂಗತಿಯನ್ನು ತಿಳಿದಾಗ ಹಾಗೆ ಮಾಡಬಾರದೆಂದು ಅಪ್ಪಣೆಕೊಟ್ಟರೆ ಅವಳು ಮಾಡಿದ ಹರಕೆಗಳೂ ಪ್ರತಿಜ್ಞೆಗಳೂ ವ್ಯರ್ಥವಾಗುವವು. ತಂದೆ ಬೇಡವೆಂದು ಹೇಳಿದದರಿಂದ ಯೆಹೋವನು ಅವಳನ್ನು ದೋಷಿಯೆಂದು ಎಣಿಸುವದಿಲ್ಲ. ( ಅರಣ್ಯ : 30:3-5 )


👱  ದುಷ್ಟ ಪುತ್ರನ ಶಿಕ್ಷಾಕ್ರಮ 


ಲೋಕದ ತಂದೆಯಂದಿರು ತಮ್ಮ ಮಕ್ಕಳು ಕೆಟ್ಟು ಹೋಗಿರುವಾಗ ದುಷ್ಟ ಮಕ್ಕಳ ವಿಷಯದಲ್ಲಿ ತಂದೆಯಂದಿರು ಏನು ಮಾಡಬೇಕು ಎಂಬ ವಿಷಯದಲ್ಲಿ  ದೇವರು ಹೀಗೆ ಹೇಳುತ್ತಾನೆ . ಇದನ್ನು ಸತ್ಯವೇದದ ಧರ್ಮೋಪದೇಶಕಾಂಡ ಪುಸ್ತಕದಲ್ಲಿ ಬರೆಯಲಾಗಿದೆ. 


( ಧರ್ಮೋ : 21:18:21 ) “ಒಬ್ಬ ಮಗನು ತಂದೆತಾಯಿಗಳ ಆಜ್ಞೆಗೆ ಒಳಗಾಗದೆ ಶಿಕ್ಷಿಸಲ್ಪಟ್ಟರೂ ಮೊಂಡನೂ ಅವಿಧೇಯನೂ ಆಗಿ ಅವರ ಮಾತನ್ನು ಕೇಳದೆಹೋದರೆ ತಂದೆತಾಯಿಗಳು ಅವನನ್ನು ಹಿಡಿದು ಊರುಬಾಗಿಲಿಗೆ ಹಿರಿಯರ ಮುಂದೆ ತಂದು ಅವರಿಗೆ ಈ ನಮ್ಮ ಮಗನು ನಮ್ಮ ಮಾತನ್ನು ಕೇಳುವದೇ ಇಲ್ಲ. ಆಜ್ಞೆಗೆ ಒಳಗಾಗುವದಿಲ್ಲ; ಇವನು ಮೊಂಡ ಕುಡಿಕ ತುಂಟ ಎಂದು ಸಾಕ್ಷಿ ಹೇಳಬೇಕು. ಆಗ ಊರಿನವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದೊಳಗಿಂದ ತೆಗೆದುಹಾಕಿಬಿಡಬೇಕು. ಇಸ್ರಾಯೇಲ್ಯರೆಲ್ಲರೂ ಕೇಳಿ ಭಯಪಡುವರು.” 


  ಮಕ್ಕಳೇ ಈಗಿನ ದಿನಗಳಲ್ಲಿ ಇಂಥ  ನಿಯಮಗಳು ಇಲ್ಲ ಆದರೆ  ಮಕ್ಕಳು ಪಶ್ಚಿಮಾತ್ಯ ಫ್ಯಾಶನ್,  ಆಡಂಬರಕ್ಕೆ , ಚಟಗಳಿಗೆ ಮಾರುಹೋಗಿ ತಂದೆ ತಾಯಿಗೆ ಅವಿಧೇಯರಾಗಿ ಅವರಿಗೆ ವಿರೋಧವಾಗಿ ಮಾತಾಡುವವರನ್ನು ನೋಡುತ್ತೇವೆ.  ಈಗಿನ ಜನಗಳಲ್ಲಿ ಅನೇಕ ಮಕ್ಕಳು ತಂದೆಯ ಮಾತನ್ನು ಕೇಳದೆ ತಾಯಿಯ ಮಾತನ್ನು ಕೇಳದೆ ತಿರಸ್ಕರಿಸಿ ತಮ್ಮ ಇಷ್ಟ ಬಂದ ರೀತಿಯಲ್ಲಿ ಪೋಲಿ ಪೋಕರುಗಳ ಗೆಳೆತನ ಮಾಡಿ ಕುಡಿಯುವ ಚಟಕ್ಕೆ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ ,  ಅಂತ ಮಕ್ಕಳ ವಿಷಯದಲ್ಲಿ ತಂದೆ-ತಾಯಿಗಳು ಎಷ್ಟೋ ನೋವನ್ನು ಅನುಭವಿಸುತ್ತಾರೆ 



ಪ್ರಿಯರೇ ನೀವು ಕೂಡ ನಿಮ್ಮ ತಂದೆ ತಾಯಂದಿರಿಗೆ ವಿಧೇಯರಾಗಿರಿ . ತಂದೆಯಾದವನು ಮಕ್ಕಳನ್ನ ಎಷ್ಟು ಪ್ರೀತಿಯಿಂದ ಆತನನ್ನು ಪೋಷಿಸಿ ಸಾಕುತ್ತಾನೆ ವಿದ್ಯಾಭ್ಯಾಸ ಕೊಡುತ್ತಾನೆ , ತಾನು ಹರಿದ ಬಟ್ಟೆಯನ್ನು ಹಾಕಿಕೊಂಡರು ಪರವಾಗಿಲ್ಲ ನನ್ನ ಮಕ್ಕಳು ಒಳ್ಳೆಯ ಬಟ್ಟೆಗಳನ್ನು ಹಾಕಿಕೊಂಡು ಅವರು ಸಂತೋಷದಿಂದ ಇರಬೇಕು ಎಂಬುದಾಗಿ ಬಟ್ಟೆ ಕೊಟ್ಟು ನಮ್ಮ ಶ್ರೇಯಸ್ಸನ್ನು ಬಯಸುವ ಶ್ರಮ ಜೀವವೇ ತಂದೆಯ ಜೀವ . 


ತಂದೆ ಕೆಲಸಕ್ಕೆ ಹೋಗಿ ಅವನು ದುಡಿಯುವುದು ಮಕ್ಕಳಿಗಾಗಿಯೇ ತನ್ನ ಕುಟುಂಬಕ್ಕಾಗಿಯೆ .  ಪ್ರಿಯರೇ ಇಂಥ ತಂದೆ ತಾಯಿಯ ವಿಷಯದಲ್ಲಿ ನೀವು ನಿರ್ಲಕ್ಷ ಮಾಡದೆ ಅವರ ಮಾತು ಕೇಳಿ ತಂದೆಯಂದಿರ ದಿನದಲ್ಲಿ ನೀವು ಬರಿ  “ಹ್ಯಾಪಿ ಫಾದರ್ಸ್ ಡೇ” ಎಂಬ ವಾಟ್ಸಪ್ ಸ್ಟೇಟಸ್ ಗಳನ್ನುಇಟ್ಟರೆ ಸಾಲದು ಯಾವ ಜೀವ ನಿಮಗೆ ವಿದ್ಯಾಭ್ಯಾಸ ಕೊಡಲು,  ನಿಮಗೆ ಒಳ್ಳೆಯ ಬಿಸಿನೆಸ್/ವ್ಯಾಪಾರ ಹಾಕಿ ಕೊಡಲು, ನಿಮಗೆ ಒಳ್ಳೆಯ ಮದುವೆ ಮಾಡಿಕೊಡಲು,  ನಿಮಗೆ ಸರ್ಕಾರಿ ಹುದ್ದೆಯನ್ನು ಕೊಡಿಸಲು ಪರಿಶ್ರಮ ಪಟ್ಟರೋ ಅಂತ ವ್ಯಕ್ತಿಯನ್ನ ನೀವು ಸನ್ಮಾನಿಸದೆ, ಕೊಡಬೇಕಾದಂತ ಗೌರವವನ್ನು ಸಹಾಯವನ್ನು ಮಾಡದಿದ್ದರೆ ಬಹಳ ದೊಡ್ಡ ಶಿಕ್ಷೆಯನ್ನ ಅನುಭವಿಸಬೇಕಾಗುತ್ತದೆ . ಸತ್ಯವೇದದ “ಎಫೆಸ ಬರೆದ ಪತ್ರಿಕೆಯಲ್ಲಿ ನಾವು ನೋಡುವಂತೆ ನೀನು ನಿನ್ನ ತಂದೆ-ತಾಯಿಗಳನ್ನು ಸನ್ಮಾನಿಸಬೇಕು ಹೀಗೆ ಮಾಡಿದರೆ ನೀನು ಲೋಕದಲ್ಲಿ ಭೂಮಿಯ ಮೇಲೆ ಬಹುಕಾಲ  ಬದುಕುತ್ತಿ ಎಂಬುದಾಗಿ ಕರ್ತನು ಹೇಳುತ್ತಾನೆ ಹಾಗಾದರೆ ಒಂದು ವೇಳೆ ಪ್ರಿಯ ದೇವ ಜನರೇ ನೀವು ನಿಮ್ಮ ತಂದೆ ತಾಯಿಗಳಿಗೆ ವಿರೋಧವಾಗಿ ನಡೆದು , ಅವರ ಮನಸ್ಸು ನೋಯಿಸಿ ಅವರನ್ನು ಹಿಂಶಿಸುವುದಾದರೆ ಅವರಿಗೆ ನೋವು ಕೊಡುವುದಾದರೆ ಇವತ್ತೇ ತಿಳಿದುಕೊಳ್ಳಿ ನಿಮ್ಮ ಈ ಲೋಕದ ಆಯುಷ್ಯವು ಕಡಿಮೆಯಾಗುತ್ತಲಿದೆ ಎಂದು .  ಇಲ್ಲವಾದರೆ ಲೋಕದಲ್ಲಿ ಬಹುಕಾಲ ಬದುಕಬೇಕಾದರೆ ನಿಮ್ಮ ತಂದೆ ತಾಯಿಯಂದಿರನ ಚೆನ್ನಾಗಿ ನೋಡಿಕೊಳ್ಳಿರಿ ಅವರು ಇಷ್ಟಪಡುವ ಕಾರ್ಯಗಳನ್ನು ಅವರಿಗೆ ಮಾಡಿರಿ ಅವರಿಗೆ ಮೆಚ್ಚಿಕೆಯಾದಂತ  ಕಾರ್ಯಗಳನ್ನೇ ಮಾಡಿರಿ, ಅವರನ್ನು ನೋಯಿಸಬೇಡಿರಿ . 


     ಪ್ರಿಯರೇ ನಾವು ಚಿಕ್ಕ ಚಿಕ್ಕ ವಿಷಯಗಳನ್ನ ತೆಗೆದುಕೊಳ್ಳುವುದಾದರೆ ಒಂದು ವೇಳೆ ನಿಮ್ಮ ತಂದೆಯಂದಿರು ಈಗಾಗಲೇ ಉದ್ಯೋಗದಲ್ಲಿದ್ದು ಅಥವಾ ಬಹಳ ಹಣ ಉಳ್ಳವರಾಗಿದ್ದರು ಕೂಡ ನಿಮ್ಮ ಆದಾಯದಲ್ಲಿ ಅವರನ್ನು ಸನ್ಮಾನಿಸಿರಿ ಅಂದರೆ ಅವರಿಗೆ ನಿಮ್ಮ ಕೈಲಾದಷ್ಟು ಹಣ ಸಹಾಯ ಮಾಡಿರಿ ನಿಮ್ಮ ತಂದೆಗೆ ನೀವು ಕೊಡುವ ಹಣದ ಅವಶ್ಯಕತೆ ಇಲ್ಲದೆ ಇದ್ದರೂ ಆ ಜೀವ ನೀವು ಕೊಟ್ಟಾಗ ಅವರಿಗೆ ಆಗುವಂತ ಆ ಸಂತೋಷ “ ನನ್ನ ಮಗನು ನಾನು ಕೇಳದಿದ್ದರೂ ನನಗೆ ಸಹಾಯ ಮಾಡಲು ನನ್ನನ್ನು ಸನ್ಮಾನಿಸಲು ಬರುತ್ತಾನೆ ಎಂಬ ಆ ಒಂದು ಪ್ರೀತಿಯೇ ನೀವು ಕೊಟ್ಟದ್ದಕ್ಕಿಂತಲೂ ಹೆಚ್ಚಾಗಿ ಅವರನ್ನು ಆಧರಿಸುವಂತದಾಗಿದೆ.  ಗೌರವಿಸುವಂತದಾಗಿದೆ . 


ಪ್ರಿಯರೇ ನಿಮ್ಮ ಉದ್ಯೋಗಕ್ಕಾಗಿ ಅವರು ಪರಿಶ್ರಮ ಪಡಲಿಲ್ಲವೇ ನಿಮ್ಮ ವಿದ್ಯಾಭ್ಯಾಸಕ್ಕಾಗಿ ಅವರು ಪರಿಶ್ರಮ ಪಡಲಿಲ್ಲವೇ ನಿಮ್ಮನ್ನ ಬೆಳೆಸಲು ಅವರು ಕಷ್ಟ ಪಡಲಿಲ್ಲವೇ ? 


 ಒಂದು ಕ್ಷಣ ನೆನಪಿಸಿಕೊಳ್ಳಿ ಪ್ರಪಂಚದಲ್ಲಿ ಅನೇಕ ಜನರು ಲೋಕದಲ್ಲಿ ಇಂಥ ಅವಕಾಶವಿಲ್ಲದೆ ತಂದೆ ತಾಯಿಯಿಲ್ಲದೆ ಅನಾಥರಾಗಿ ಬೆಳೆದಿದ್ದಾರೆ.  ನೀವಾದರೂ ಅದೃಷ್ಟವಂತರು ನಿಮ್ಮ ತಂದೆ ತಾಯಿಯಂದಿರು ನಿಮ್ಮನ್ನ ಈಗಿರುವ  ಒಂದು ಒಳ್ಳೆಯ ಸ್ಥಿತಿಗೆ ತಂದಿದ್ದಾರೆ .  ನಿಮ್ಮನ್ನು ಬೆಳೆಸಿದ್ದು ನಿಮ್ಮ ತಂದೆ ತಾಯಿ ನೀವು ಅತ್ತಾಗ ನೀವು ಮಗುವಾಗಿದ್ದಾಗ ನಿಮ್ಮ ಮಲ ಮೂತ್ರಗಳ ತೊಳೆದು ನಿಮ್ಮನ್ನ ಪ್ರೀತಿಸಿ ಹೆಗಲ ಮೇಲೆ ಹೊತ್ತು ಮೆರೆದಿದ್ದು ನಿಮ್ಮ ತಂದೆಯೇ ....... 


ಪ್ರಿಯ ದೇವ ಜನರೇ ನೀವು ಮಗುವಾಗಿದ್ದಾಗ ನಡೆಯುವಾಗ ಎಡುವಿ ಬಿದ್ದಾಗ ನಿಮ್ಮನ್ನು ಎತ್ತಿ ಆಡಿಸಿದ್ದು ಅದೇ ಕಷ್ಟ ಪಟ್ಟ ಕೈಗಳೇ..... 


 ದಿನವು ಕೂಡ ಕಷ್ಟದ ಕಡಲಿನಲ್ಲಿ ಕಷ್ಟದ ಜೀವಿತದಲ್ಲಿ ದುಡಿಮೆಯಲ್ಲಿ ಕೈಗಳು ಹೊಲಸಾಗಿದ್ದರು ಶುಭ್ರ ಮಾಡಿಕೊಂಡು ಎದೆಗಪ್ಪಿ ಪ್ರೀತಿಸಿದ್ದು ಆ ಶ್ರಮಜೀವಿ ತಂದೆಯೇ …. 


 ನೀವು ಕೂಡ ತಂದೆಯಾಗಿದ್ದರೆ ಒಂದು ಕ್ಷಣ ನಿಮ್ಮ ಮಗುವನ್ನು ನೋಡಿ “ನೀವು ಮಗುವಾಗಿದ್ದಾಗ ನಿಮ್ಮ ತಂದೆ ನಿಮ್ಮನ್ನು ಬೆಳೆಸಲು ನಿಮಗೆ ವಿದ್ಯಾಭ್ಯಾಸ ಕೊಡಲು ಪಟ್ಟ ಪ್ರಯಾಸವನ್ನು ಕಷ್ಟವನ್ನು ಅವಮಾನವನ್ನ ನೆನಪಿಸಿಕೊಳ್ಳಿ . 


ಹೀಗೆ ಮಾಡಿ ಅವರನ್ನ ಗೌರವಿಸಿರಿ ಒಂದು ವೇಳೆ ಈಗ ನಿಮಗೆ ತಂದೆ ತಾಯಿಗಳು ಇಲ್ಲದೆ ಇರಬಹುದು ಆದರೆ ನಿಮ್ಮ ತಂದೆಯ ವಯಸ್ಸಿನವರನ್ನ ವೃದ್ಯಾಪ ದಲ್ಲಿ ಇರುವಂತಹ ಹಿರಿಯರನ್ನ ಅದೇ ಸ್ಥಾನದಲ್ಲಿಟ್ಟು ಸನ್ಮಾನಿಸಿರಿ ಹೀಗೆ ಮಾಡಿದರೆ ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ ನಿಮ್ಮ ಆಯುಷ್ಯವನ್ನು ಅಭಿವೃದ್ಧಿಗೊಳಿಸುತ್ತಾನೆ . 


ಪ್ರಿಯ ದೇವ ಜನರೇ ನಾವು ನೋಡುತ್ತೇವೆ ಮಕ್ಕಳೇ ನಿಮ್ಮ ಆದಾಯದಲ್ಲಿ ನಿಮ್ಮ ಸಮಯದಲ್ಲಿ ನಿಮ್ಮ ಪ್ರತಿಯೊಂದು ಕಾರ್ಯದಲ್ಲಿ ನಿಮ್ಮ ತಂದೆಯ ಮಾತನ್ನು ಕೇಳಿರಿ ಯಾವ ತಂದೆ ನಿಮ್ಮನ್ನು ಸಾಕಿ ಬೆಳೆಸಿದ್ದಾನೋ ಆ ತಂದೆಯು ನಿಮಗಾಗಿ ಅಷ್ಟೊಂದು ಕಷ್ಟಪಟ್ಟಿರುವಾಗ  ನಿಮ್ಮ ಉದ್ಯೋಗದ ಸಮಯದಲ್ಲಿಯೂ  ನಿಮಗೆ ಉದ್ಯೋಗ ಕೊಡಿಸಲು ಕಷ್ಟಪಟ್ಟ ತಂದೆಯನ್ನೇ ಮರೆತು ಆ ಉದ್ಯೋಗದ ನೆಪ  ಹೇಳುವುದಾದರೆ ಅದು ಎಷ್ಟೋ ವಿಪರ್ಯಾಸ .  ಪ್ರಿಯ ದೇವ ಜನರೇ ಯಾವ ತಂದೆಯು ತನ್ನ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸಕೊಟ್ಟು ಉದ್ಯೋಗ ಹಚ್ಚಿದರೆ ಅದೇ ಮಗನು ಆ ತಂದೆಯ ಸಂಗಡ ಸ್ವಲ್ಪ ಸಮಯ ಮಾತನಾಡಿ ಪ್ರೀತಿ ಹಂಚಿ ಸಮಯ ಕಳೆಯುದಿದ್ದರೆ ಏನು ಲಾಭ ನಿಮ್ಮ ಉದ್ಯೋಗ ನಿಮ್ಮ ವರ್ಚಸ್ಸು ನಿಮ್ಮ ಆಸ್ತಿ ನಿಮ್ಮ ಐಶ್ವರ್ಯ ನಿಮ್ಮ ಸಮಯ ಇದ್ದರೂ ಕೂಡ ಅದು ವ್ಯರ್ಥವೇ . 


ದೇವ ಜನರೇ ನಿಮ್ಮ ತಂದೆಗೆ ತಾಯಿಗೆ ಕೊಡಬೇಕಾದ ಸಮಯವನ್ನು ಕೊಡಿರಿ. ಈಗಿನ ದಿನಗಳಲ್ಲಿ ಅನೇಕರನ್ನು ನಾವು ನೋಡುತ್ತೇವೆ “ ನಮ್ಮ ತಂದೆ ವಯಸ್ಸಾಗಿದೆ ಸುಮ್ಮನಿರುವುದಿಲ್ಲ ಅವರು ಮಾತನಾಡುತ್ತಾರೆ ಹಾಗೆ ಹೀಗೆ ಎಂಬುದಾಗಿ ಹೇಳುತ್ತಾರೆ “ , ಈಗಿನ ಜನಗಳಲ್ಲಿ ಮಾತು ಬಿಡುವುದು ಒಂದು ಹೊಸ ಟ್ರೆಂಡ್ ಆಗಿದೆ ಹುಟ್ಟಿಸಿದ ತಂದೆಯನ್ನ ಬೆಳೆಸಿದ ತಂದೆಯನ್ನ ಬೆಳೆಸಲು ಕಷ್ಟಪಟ ತಂದೆಯೊಂದಿಗೆ ಮಾತು ಬಿಡುವಂತಹ ಮಕ್ಕಳನ್ನ ನೋಡುತ್ತೇವೆ. ನೀವು ನಿಜವಾಗಿಯೂ ಮನುಷ್ಯರೇ,  ನಿಮಗೂ ಪ್ರಾಣಿಗಳಿಗೂ ನಿಜವಾಗಿಯೂ ವ್ಯತ್ಯಾಸವಿದೆಯೆ ?  ನಿಮ್ಮ ತಂದೆ ನಿಮ್ಮನ್ನು ಬೆಳೆಸಿ ಆಡಿಸಿ ನಿಮಗೆ ಮಾತು ಬರದೇ ಇದ್ದಾಗ ನಿಮಗೆ ಮಾತನಾಡಲು ಕಲಿಸಿ ನೀವು ತೊದಲು ನುಡಿಯಿಂದ ಅಪ್ಪ ಎಂಬದಾಗಿ ಮಾತಾಡುವಾಗ ಮಗನನ್ನ ಅಪ್ಪಿ ಸಂಭ್ರಮಿಸಿದ ತಂದೆ ಜೊತೆ  ನೀವು ಮಾತು ಬಿಡುವುದಾದರೆ ಅವರ ಚಿಕ್ಕ ಬೆದರಿಕೆಯನ್ನು ಅಥವಾ ಅವರು ನಿಮಗೆ ತಿಳಿ ಹೇಳುವಾಗ ಬುದ್ಧಿ ಮಾತು ಹೇಳುವಾಗ ಅವರನ್ನು ತಿರಸ್ಕರಿಸಿ ಅಷ್ಟಕ್ಕೆ ನೀವು ಸಿಟ್ಟಾಗಿ ಅವರ ಸಂಗಡ ಮಾತು ಬಿಡುವುದಾದರೆ ಇದು ನಿಜವಾಗಿಯೂ ಮಾನವ ಕುಲದ ಅಮಾನವೀಯ ಸ್ಥಿತಿಯೇ ಸರಿ .  ಆಲೋಚಿಸಿರಿ  ಸ್ನೇಹಿತರೆ ಇವತ್ತೇ ನಿಮ್ಮ ತಂದೆಯೊಂದಿಗೆ ಮಾತನಾಡಿ ನಿಮ್ಮ ತಾಯಿಯೊಂದಿಗೆ ಮಾತನಾಡಿ . 


ಆಲೋಚಿಸರಿ ಪ್ರಿಯ ದೇವ ಜನರೇ ಈಗಿನ ದಿನಗಳಲ್ಲಿ ವೃದ್ದಾಶ್ರಮದಲ್ಲಿ ನಾವು ನೋಡುತ್ತೇವೆ ವಯಸ್ಸಾದ ತಂದೆ ತಾಯಿಯನ್ನು ಬಿಟ್ಟು ಹೋಗುವಂತದ್ದನ್ನು . ಯಾವ ತಂದೆ ಮಗನು ಒಳ್ಳೆಯವನಾಗಿ ,  ಸಂತೋಷದಿಂದ ಇರಬೇಕು ಎಂಬುದಾಗಿ ದೊಡ್ಡ ಹುದ್ದೆಯಲ್ಲಿ ಇರಬೇಕು ದೊಡ್ಡ ಸ್ಥಾನದಲ್ಲಿ ಇರಬೇಕು ಎಂಬುದಾಗಿ ತನ್ನ ಬೆವರು ಹರಿಸಿ ತನ್ನ ಜೀವನ ತ್ಯಾಗ ಮಾಡಿ ಕಷ್ಟಪಟ್ಟು ವಿದ್ಯಾಭ್ಯಾಸ ಕೊಟ್ಟು ಕಲಿಸಿ ಉದ್ಯೋಗಕ್ಕೆ ಹಚ್ಚಿದರೆ ಆ ಮಗನಾದರು ತಂದೆ-ತಾಯಿಯನ್ನು ಬಿಟ್ಟು ಬೇರೆ ಬೇರೆ ದೇಶಗಳಿಗೆ ಹೋಗಿ ಕೆಲಸದ ನಿಮಿತ್ತವಾಗಿ ಹೋಗಿ ತಂದೆ ತಾಯಿಗಳನ್ನು ಮರೆಯುವುದು ಈಗಿನ ದಿನಗಳಲ್ಲಿ ಸಾಮಾನ್ಯವಾಗಿದೆ. 


ಒಂದು ನಿದರ್ಶನವನ್ನು ನೆನಪು ಮಾಡಿಕೊಳ್ಳುವುದಾದರೆ ಒಬ್ಬನೇ ಒಬ್ಬ ಮಗನನ್ನ ಪ್ರೀತಿಯಿಂದ ಮುದ್ದಿಸಿ ಜೀವನವನ್ನು ತ್ಯಾಗ ಮಾಡಿ ಆತನಿಗೆ ಇಂಜಿನಿಯರಿಂಗ್ ಕಲಿಸಿ ದೊಡ್ಡ ಕಂಪನಿಯಲ್ಲಿ ಕೆಲಸವನ್ನ ಕೊಡಿಸಿ ಆತನ ಸಂತೋಷವನ್ನು ಬಯಸಿದ ತಂದೆ ತಾಯಿಗಳು ಊರಿನಲ್ಲಿ ಇದ್ದು ಆ ಮಗನಾದರು ಮದುವೆಯಾಗಿ ತನ್ನ ಹೆಂಡತಿಯೊಂದಿಗೆ ಅಮೆರಿಕ ದೇಶದಲ್ಲಿದ್ದು ತಂದೆಗೆ ಅನಾರೋಗ್ಯ ಬಂದಾಗ ತಾಯಿಗೆ ಅನಾರೋಗ್ಯ ಬಂದಾಗ ನಾನು ದುಡ್ಡು ಕಳುಹಿಸುತ್ತೇನೆ ನಿಮ್ಮ ಆರೋಗ್ಯಕ್ಕೆ ನೀವೇ ವೈದ್ಯರ ಬಳಿಗೆ ಹೋಗಿ ಡಾಕ್ಟರ್ ಬಳಿಗೆ ಹೋಗಿ ತೋರಿಸಿಕೊಳ್ಳಿ ಎಂಬುದಾಗಿ ಹೇಳುವಾಗ ಆ ತಂದೆ-ತಾಯಿಗಳು ಇದಕ್ಕಾಗಿಯೇ ಆತನನ್ನು ಬೆಳೆಸಿದ್ದು ಈ ಒಂದು ಕಾರಣಕ್ಕಾಗಿ ಬೆಳೆಸಿದರೆ ಆಲೋಚಿಸಿರಿ ನಿಮ್ಮ ಹಣ ನಿಮ್ಮ ಉದ್ಯೋಗ ನಿಮ್ಮ ವರ್ಚಸ್ಸು ಇವೆಲ್ಲವುಗಳಿಗಿಂತ ಹೆಚ್ಚು ಲೋಕದಲ್ಲಿ ಜೀವವಿರುವ ನಿಮ್ಮ ತಂದೆ ತಾಯಿಯಲ್ಲವೇ ? 


ನಿಮಗೆ ಹೇಳುವುದಾದರೆ ಪ್ರಾಚೀನ ಕಾಲದಲ್ಲಿ ಈಜಿಪ್ಟನಲ್ಲಿ ಒಂದು ಸಂಸ್ಕೃತಿ ಇತ್ತು - ಯಾವನಾದರೂ ತಂದೆ ಆತನಿಗೆ ಮಗುವಾಗಿದ್ದಾಗ ಆ ಹೆರಿಗೆ ಮಾಡಿಸಿಕೊಳ್ಳುವವರ  ಬಳಿ ಆ ತಂದೆ ಈ ಮಗು ನನಗೆ ಬೇಡ ಎಂಬುದಾಗಿ ಹೇಳುವುದಾದರೆ ಆ ಮಗುವನ್ನ ಅಲ್ಲೇ ಕೊಲ್ಲುತ್ತಿದ್ದರು. ಯಾಕೆಂದರೆ ಅಂತಹ ಹಕ್ಕು ಆ ಒಂದು ಸಂಸ್ಕೃತಿಯಲ್ಲಿ ಪ್ರತಿ ತಂದೆಗೆ ಇತ್ತು . ಹುಟ್ಟಿಸಿದ ತಂದೆಗೆ ಆ ಮಗುವಿನ ಮೇಲೆ ಹಕ್ಕಿದೆ ಎಂಬುದನ್ನು ಆ ಒಂದು ಸಂಸ್ಕೃತಿ ತಿಳಿಸುತ್ತಿತ್ತು . ಆದರೆ ನಿಮ್ಮ ತಂದೆ ತಾಯಿಗಳು ನೀವು ಮೊಂಡರದಾಗ ,  ನೀವು ತಪ್ಪು ಮಾಡಿದಾಗ ನಿಮ್ಮನ್ನು ಕ್ಷಮಿಸಿ . ನೀವು ಅತ್ತಾಗ ನಿಮ್ಮ ಕಣ್ಣೀರು ಒರೆಸಲಿಲ್ಲವೇ? ನೀವು ಕುಗ್ಗಿದಾಗ ನೀವು ವಿದ್ಯಾಭ್ಯಾಸದಲ್ಲಿ ಹಿಂದುಳಿದಾಗ ,  ನೀವು ಕಷ್ಟ ಪಡುವಾಗ ನಿಮ್ಮ ಸಂಗಡ ಇರಲಿಲ್ಲವೇ?


ದೇವರು ಲೋಕದ ಮನುಷ್ಯರನ್ನ ಪರಿಪಾಲಿಸುವುದಕ್ಕೆ , ಬೆಳೆಸುವುದಕ್ಕೆ ಆತನು ಯಾವಾಗಲೂ ಲೋಕದಲ್ಲಿ ಇರಲು ಸಾಧ್ಯವಿಲ್ಲದೆ ಇರುವುದರಿಂದ ಪಾಪಿಯಾದ ಮನುಷ್ಯರ ಲೋಕದಲ್ಲಿ ಆತನು ಇರಲು ಆಗದೆ ಇರುವುದರಿಂದ ಪ್ರತಿಯೊಬ್ಬ ಮಕ್ಕಳಿಗೆ ತಂದೆಯಂದಿರನ ಕೊಟ್ಟಿದ್ದಾನೆ ತಂದೆಗಳು ಮಕ್ಕಳನ್ನ ಶಿಕ್ಷಿಸಿ ಬೆಳೆಸಲು ಅವರಿಗೆ ಆ ಒಂದು ಜವಾಬ್ದಾರಿಯು ಇದೆ ಪ್ರಿಯ ದೇವ ಜನರೇ ನಿಮ್ಮ ಆಯುಷ್ಕಾಲ ಹೆಚ್ಚಾಗಬೇಕಾದರೆ ನೀವು ನಿಮ್ಮ ತಂದೆ ತಾಯಿಯ ಮಾತನ್ನು ಕೇಳಲೇಬೇಕು ಯಾಕೆಂದರೆ ಇದುವೇ ಧರ್ಮವಾಗಿದೆ. 


ಆದರೆ ಪ್ರಿಯರೇ ನೀವು ನಿಮ್ಮ ತಂದೆಯಂದಿರುನ ಗೌರವಿಸುತ್ತಿದ್ದೀರೋ ಆಲೋಚಿಸಿರಿ ಮಕ್ಕಳೇ ನಿಮ್ಮ ತಂದೆಗೆ ಕೊಡಬೇಕಾದಂತ ಸನ್ಮಾನವನ್ನು ಪ್ರೀತಿಯನ್ನು ಕೊಡುತ್ತಿದ್ದೀರಾ ಇಲ್ಲವಾದರೆ ಇವತ್ತೇ ನಿರ್ಧರಿಸಿ ನಿಮ್ಮ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಿರಿ ತಾಯಿ ಬಯ್ಯುವುದು ತಂದೆ-ಬಯ್ಯುವುದು ನಿಮ್ಮ ಒಳ್ಳೇದಕ್ಕಾಗಿಯೇ . 


ಪ್ರತಿಯೊಬ್ಬ ತಂದೆಯು ಮಗನನ್ನ ಮಗಳನ್ನ ತಪ್ಪು ಮಾಡಿದಾಗ ಪ್ರೀತಿಯಿಂದ ಶಿಕ್ಷೆ ಕೊಟ್ಟು ಬೆಳೆಸುವುದೇ ನಿಜವಾದ ತಂದೆಯ ಲಕ್ಷಣವಾಗಿದೆ ಒಂದು ವೇಳೆ ನಿಮ್ಮ ಮಕ್ಕಳು ಚಿಕ್ಕವರಿರುವಾಗಲೇ ಬಯ್ಯುವುದಾಗಲಿ ತಪ್ಪು ಮಾಡುವುದಾಗಲಿ ಅಥವಾ ಏನಾದರೂ ತಪ್ಪು ಮಾಡಿದರೆ ನೀವು ಅವರನ್ನು ಶಿಕ್ಷಿಸಿರಿ . ಇಲ್ಲವಾದರೆ  ಅವರು ದೊಡ್ಡ ತಪ್ಪುಗಳನ್ನು ಮಾಡುವಾಗ ನೀವು ಅಸಹಾಯಕರಾಗಿ ನಿಲ್ಲಬೇಕಾಗುತ್ತದೆ. 


 ಚಿಕ್ಕ ಮಗುವಾಗಿರುವಾಗಲೇ ಶಿಕ್ಷಿಸಿ ಒಳ್ಳೆಯ ಶಿಸ್ತನ್ನು ಕಲಿಸಿ . ಯಾವ ಮಕ್ಕಳು ತಂದೆಯಿಂದ ಶಿಕ್ಷೆ ಹೊಂದಿ ಬೆಳೆಯುತ್ತಾರೆ ಅವರು ಒಳ್ಳೆಯ ಮಕ್ಕಳಾಗಿ ಬೆಳೆಯುತ್ತಾರೆ ಮತ್ತು ಉಳಿಯುತ್ತಾರೆ ನೀವು ನಿಮ್ಮ ಮಕ್ಕಳನ್ನ ಹೇಗೆ ಬೆಳೆಸುತ್ತಿದ್ದೀರಿ ?  ನಿಮ್ಮ ಮಕ್ಕಳಿಗೆ ಅತಿಯಾದ ಸಲುಗೆಯನ್ನು ಕೊಟ್ಟು ಅವರು ನಿಮಗೆ ಹೆದರದೆ ನಿಮ್ಮ ಆಜ್ಞೆಗಳ ಕೈಕೊಂಡು ನಡೆಯದೆ ಇರುವ ಹಾಗೆ ಮಾಡಿಕೊಳ್ಳಬೇಡಿ.  ಹಾಗೆ ತಾಯಂದಿರೆ ನಿಮ್ಮ ಗಂಡಂದಿರು ಮಕ್ಕಳಿಗೆ ಗದರಿಸಿ ಬುದ್ಧಿ ಹೇಳುವಾಗ ಅದನ್ನು ತಾತ್ಸಾರ ಮಾಡಬೇಡಿರಿ ನಿಮ್ಮ ಮಕ್ಕಳಿಗೆ ಹೇಳಿರಿ ನಿಮ್ಮ ತಂದೆಯ ಮಾತನ್ನು ಕೇಳಿ ಎಂದು . 


ನಿಜವಾದ “ ಫಾದರ್ಸ ಡೇ “  ಆಚರಿಸುವದಲ್ಲ , ತಂದೆಗೆ ಒಳ್ಳೆಯ ಮಕ್ಕಳಾಗಿ ನಡೆಯುವದು ....


                                                                                        - Bro Prabhu


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು