ಬರಬ್ಬ ಯಾರು ?/Who is Barabba ?


ಬರಬ್ಬ ಯಾರು ?

             

            ನಮಗಾಗಿ ತನ್ನ ಪ್ರಾಣವನ್ನೇ ಕೊಟ್ಟು ನಮ್ಮನ್ನು ಸಂಪಾದಿಸಿಕೊಂಡ ಒಳ್ಳೆಯ ಕುರುಬನಾದ ಯೇಸುಕ್ರಿಸ್ತನ ನಾಮಕ್ಕೆ ಸ್ತೋತ್ರವುಂಟಾಗಲಿ ಹಾಗೂ  ನಿಜವಾದ ಗುಡ್ ಫ್ರೈಡೆ ಅರ್ಥವನ್ನು ತಿಳಿದ ಪ್ರತಿಯೊಬ್ಬರಿಗೂ ಶುಭಾಶಯಗಳು . "ಬರಬ್ಬ ಹೆಸರಿನ ಅರ್ಥ ತಂದೆಯ ಮಗನು."(Bar Abba).   


Robber·         ಅವನು ಪ್ರಸಿದ್ಧ ಕಳ್ಳನಾಗಿದ್ದನು (ಯೋಹಾನ:18:40, ಮತ್ತಾಯ:27:16) .

·         ಒಬ್ಬ ಕೊಲೆಗಾರನಾಗಿದ್ದನು (ಲೂಕ :23:19)

·         ಒಬ್ಬ ದಂಗೆಕೋರನಾಗಿದ್ದನು (ಲೂಕ :23:19)

·         ಅವನು  ಸೆರಮನೆಯಲ್ಲಿದ್ದನು (ಲೂಕ:23:20) 

·         ಅವನನ್ನು ಕಟ್ಟಿಹಾಕಿದ್ದರು (ಮಾರ್ಕ: 15:6-7)

 

 ಪಿಲಾತನು ಯೇಸುವನ್ನು ವಿಚಾರಿಸುವ ವೇಳೆ ಯೇಸುವಿನಲ್ಲಿ ಯಾವ ಅಪರಾಧವು ಕಾಣಲಿಲ್ಲ.  ಅದಕ್ಕಾಗಿ ಪಿಲಾತನು ಯೇಸುವನ್ನು ಬಿಡಿಸಲು ಮೂರು ಸಾರಿ  ಪ್ರಯಿತ್ನಿಸಿದನು. (ಯೋಹಾನ:18:38,19:4,6, ಲೂಕ :23:4,14,15,22) [ನಾನು ಇವನಲ್ಲಿ ಮರಣದಂಡನೆಗೆ ತಕ್ಕ ಅಪರಾಧವೇನೂ ಕಾಣಲಿಲ್ಲಆದದರಿಂದ ಇವನನ್ನು ಹೊಡಿಸಿ ಬಿಟ್ಟುಬಿಡುತ್ತೇನೆ ಎಂದು ಅವರಿಗೆ ಹೇಳಿದನು].  

ಪಸ್ಕ ಹಬ್ಬದಲ್ಲಿ ಸೆರೆಮನೆಯಲ್ಲಿರುವ ಒಬ್ಬನನ್ನು  ಬಿಡಿಸುವ ಪದ್ದತಿ ಇತ್ತು. ಅದಕ್ಕೆ ಅವನು ಯೇಸುವನ್ನು ಬಿಡಿಸಲು ಆಲೋಚಿಸಿ ಬರಬ್ಬನನ್ನು ಕರೆಸಿ ಜನರ ಮುಂದೆ ನಿಲ್ಲಿಸಿ ಇಬ್ಬರಲ್ಲಿ ಯಾರನ್ನು ಬಿಟ್ಟು ಬಿಡಬೇಕು ಎಂದು ಜನರಿಗೆ ಕೇಳಿದನು . ಆದರೆ ಪಿಲಾತನ ಆಲೋಚನೆ ನೆರವೇರಲಿಲ್ಲ . ಯಾಕಂದರೆ ಮಹಾಯಾಜಕರು,ಹಿರಿಯರು  ಜನರನ್ನು ಯೇಸು ಕ್ರಿಸ್ತನ ವಿರುದ್ಧವಾಗಿ ಮೊದಲೇ ಪ್ರೇರೇಪಿಸಿದ್ದರು ಮತ್ತು ಯೇಸುವಿನ ಬದಲಾಗಿ ಬರಬ್ಬನನ್ನೇ ಬಿಟ್ಟುಕೊಡಬೇಕೆಂದು ಬೇಡಿಕೊಳ್ಳಿರಿ ಎಂಬದಾಗಿ ಜನರನ್ನು ಪ್ರೇರೇಪಿಸಿದರು (ಮಾರ್ಕ :15:1, 11, ಮತ್ತಾಯ :27:20).

  ಎಂಥ ವಿಪರ್ಯಾಸ ಪ್ರಿಯರೆ !!! ಮನುಷ್ಯನ ದುಷ್ಟ ಹೃದಯವು ಸೃಷ್ಟಿ ಕರ್ತನಿಗಿಂತ  ಒಬ್ಬ ಕಳ್ಳನಿಗೆ ಆದ್ಯತೆ ನೀಡಿತ್ತು . ಜನರೆಲ್ಲರೂ ಯೇಸುವನ್ನು ಶಿಲುಬೆಗೆ ಹಾಕಿಸು ಎಂದು ಜೋರಾಗಿ ಕೂಗಿದರು . ಅವರೆಲ್ಲರೂ ಜೀವನಾಯಕನ  ಬದಲಾಗಿ ಒಬ್ಬ ಕೊಲೆಗಾರನಾದ  ಬರಬ್ಬನನ್ನು ಆರಿಸಿದರು . ಪೇತ್ರನು .ಕೃ. ಪುಸ್ತಕದಲ್ಲಿ ಹೀಗೆ ಹೇಳುತ್ತಾನೆನೀವು ಪರಿಶುದ್ಧನೂ ನೀತಿವಂತನೂ ಆಗಿರುವ ಪುರುಷನನ್ನು ಬೇಡವೆಂದು ಹೇಳಿ ಕೊಲೆಗಾರನಾದ ಮನುಷ್ಯನನ್ನು ಬಿಡಿಸಿಕೊಡಬೇಕೆಂದು ಬೇಡಿಕೊಂಡು ಜೀವನಾಯಕನನ್ನು ಕೊಲ್ಲಿಸಿದಿರಿಎಂಬುದಾಗಿ (.ಕೃ:3:14). ಇಂಥ ಸಂದರ್ಭದಲ್ಲಿ ಯೇಸುವನ್ನು ಬಿಡಿಸಿರಿ ಎಂಬ ಒಂದು ಧ್ವನಿಯಾದರೂ  ಅಲ್ಲಿ ಬರಲಿಲ್ಲ . ಯೇಸುವಿನಿಂದ ಸ್ವಸ್ಥರಾದವರು, ಆತನಿಂದ ಹಸಿವೆ ನೀಗಿಸಿಕೊಂಡವರು ಒಬ್ಬರೂ  ಆತನ ಪರವಾಗಿ ಮಾತನಾಡಲು ಅಲ್ಲಿ  ಇರಲಿಲ್ಲ . ಎಲ್ಲರೂ ಶಿಲುಬೆಗೆ ಹಾಕಿರಿ ಎಂದು ಕೂಗುವವರೇ ಇದ್ದರು. ಈಗಿನ ದಿನಗಳಲ್ಲಿ ಕ್ರೈಸ್ತ ಸೇವಕರಿಗೆ ಜನರಿಂದ ಹಿಂಸೆಯಾಗುವಾಗ ಅವರ ಮೇಲೆ ಸುಳ್ಳಾಗಿ ತಪ್ಪು ಹೊರಿಸುವಾಗ ವಿಶ್ವಾಸಿಗಳಾದ ನಾವು ಅವರ ಪರವಾಗಿ ನಿಂತಿದ್ದೇವಾ ? ನಮ್ಮ ದೇಶದ ಕಾನೂನು ನಮ್ಮ ಸಂಗಡ ಇರುವಾಗಲೂ ಸತ್ಯ ಹೇಳಲು ನಾವು ಮುಂದೆ ಬರುತ್ತಿಲ್ಲವಾ ? ನಮ್ಮ ಸೇವಕರ ಪರವಾಗಿ ನಿಂತು ಅವರನ್ನು ಬಿಡಿಸಲು ಬರುತ್ತೇವಾ ? ಆಲೋಚಿಸಿರಿ …. 

ಯೇಸು   ಒಮ್ಮೆಯೂ ಜನರಿಗೆ ನೋವು ಕೊಡಲಿಲ್ಲ, ಅವರ ಕಣ್ಣೀರನ್ನು ಒರೆಸುವವನಾಗಿದ್ದನು . ಆದರೂ  ಜನರು ಬರಬ್ಬನನ್ನು ಆರಿಸಿಕೊಂಡರು ? ಯಾಕೆಂದರೆ ಬರಬ್ಬ ಜನರಿಂದ ಪಶ್ಚತ್ತಾಪವನ್ನು , ಮಾನಸಾಂತರವನ್ನು, ಕೆಟ್ಟ ಪಾಪ ಕೃತ್ಯಗಳ ವಿಸರ್ಜನೆಯನ್ನು ಬಯಸಲಿಲ್ಲ .  

ಪ್ರಿಯರೆ ಏಕೆ ಪಿಲಾತನು ಯೇಸು ಕ್ರಿಸ್ತನನ್ನು ಬಿಡಿಸಲು ನೋಡಿದನು ಎಂಬುದಾಗಿ ತಿಳಿಯುವವದಾದರೆ ಪಿಲಾತನಿಗೆ ಯೇಸು ಯಾರಲ್ಲಾ ಎಂದು ಗೊತ್ತಿತ್ತು .ಅಂದರೆ ಯೇಸು ಎಂಥ ವ್ಯಕ್ತಿ ಅಲ್ಲ ಎಂದು ತಿಳಿದಿದ್ದನು . ಯೇಸು ಕಳ್ಳನಲ್ಲ, ದಂಗೆಕೋರನಲ್ಲ , ಡಕಾಯಿತನಲ್ಲ, ಕೆಟ್ಟವನಲ್ಲ ಎಂದು ಪಿಲಾತನಿಗೆ ಗೊತ್ತಾಗಿತ್ತು . ಆದರೆ ಅವನಿಗೆ ಯೇಸು ಕ್ರಿಸ್ತನು ನಿಜವಾಗಿಯೂ ಏನಾಗಿದ್ದಾನೆ ? ಆತನು ಯಾರು ಎಂದು ವೈಯಕ್ತಿಕವಾಗಿ ತಿಳುಕೊಂಡಿರಲಿಲ್ಲ . ಹೌದು ಈಗಲೂ ಕೂಡ ಎಷ್ಟೋ ಜನರು ಇತಿಹಾಸದಲ್ಲಿ ಯೇಸು ಕ್ರಿಸ್ತನ  ಬಗ್ಗೆ ಓದಿ ತಿಳುಕೊಂಡಿರುತ್ತಾರೆಯೇಸು ಒಬ್ಬ ಬೋಧಕ , ಶಾಂತಿಯ ಸಂದೇಶ ಸಾರಿದವನು , ಅವನು ಪವಾಡ ಪುರುಷರಲ್ಲಿ ಒಬ್ಬನು ಎಂಬುದಾಗಿ ತಿಳುಕೊಳ್ಳುತ್ತಾರೆ.   ಆದರೆ ಆತನು ನಮ್ಮ ನಿಮ್ಮೆಲ್ಲರ ಹಾಗೂ ಲೋಕದ ಎಲ್ಲಾ ಜನರ ಪಾಪವನ್ನು ತನ್ನ ಮೇಲೆ ಹೊತ್ತುಕೊಂಡು ನಮ್ಮನ್ನು ನರಕದಿಂದ ಬಿಡಿಸಿದವನು , ಆತನಲ್ಲಿಯೇ ಹೊರತು ಬೇರೆ ಎಲ್ಲಿಯೂ ನಿತ್ಯಜೀವ ಸಿಗಲಾರದು ಎಂದು ಎಷ್ಟೋ ಜನರಿಗೆ ಗೊತ್ತಿಲ್ಲ . ಓದುಗರೇ ನಿಮ್ಮಲ್ಲಿ ಯಾರಾದರೂ ಇನ್ನೂ ಯೇಸುವಿನ ಬಗ್ಗೆ, ಆತನ ರಕ್ಷಣೆಯ ಬಗ್ಗೆ , ಆತನಿಂದ ಸಿಗುವ ನಿತ್ಯಜೀವದ ಬಗ್ಗೆ ಗೊತ್ತಿಲ್ಲವೆಂದರೆ ಈಗಲೇ ಪ್ರಾರ್ಥಿಸಿ ತಿಳುಕೊಳ್ಳುವದಕ್ಕೆ ಪ್ರಯತ್ನಿಸಿ.  

ಕೊನೆಗೆ ಯೇಸುವನ್ನು ಶಿಲುಬೆಯ ಮೇಲೆ  ಇಬ್ಬರು ಕಳ್ಳರ ಮಧ್ಯದಲ್ಲಿ ನೇತು ಹಾಕಿದರು . ಇಬ್ಬರು ಕಳ್ಳರೊಂದಿಗೆ ಬರಬ್ಬನನ್ನು ಶಿಲುಬೆಗೆ ಹಾಕಬೇಕಿತ್ತು . ಆದರೆ ಅವನ ಬದಲಾಗಿ ಯೇಸುವನ್ನು ಹಾಕಿದರು .

ಯಾವ ದೇವರು ಮನುಷ್ಯನನ್ನು ತನ್ನ ಮಹಿಮೆಗಾಗಿ ಸೃಷ್ಟಿಸಿದ್ದನೋ ಅದೇ ಮನುಷ್ಯ ಸೃಷ್ಟಿ ಕರ್ತನನ್ನು ಹಿಂಸಿಸಿದನು.(ಯೆಶಾಯ : 43:7)

ಯಾವ ದೇವರು ಮಾನವನು ಪಾಪಮಾಡಿದಾಗ ಅವನಿಗೆ ಚರ್ಮದ ಅಂಗಿಯನ್ನು ಕೊಟ್ಟು ಬಟ್ಟೆ ತೊಡಿಸಿದನೋ ಅದೇ ಮಾನವನು ಯೇಸುವಿನ ಬಟ್ಟೆಗಾಗಿ ಚೀಟುಹಾಕಿದನು.(ಆದಿಕಾಂಡ :3:21,ಯೋಹಾನ:19:23-24 ) ,

ಯಾವ ದೇವರು ಮನುಷ್ಯರಿಗೆ ಮಾತನಾಡಲು ಸ್ವರ ಕೊಟ್ಟಿದ್ದನೋ ಅದೇ ಮನುಷ್ಯ ದೇವರನ್ನು  “ಶಿಲುಬೆಗೆ ಹಾಕಿಸಿಎಂದು ತಮ್ಮ ಸ್ವರದಿಂದ ಕೂಗುತ್ತಿದ್ದರು ( ವಿಮೋ:4:11, ಲೂಕ:23:18-23).

ಯಾವ ದೇವರು ಮನುಷ್ಯನ ಪಾಪದ ನಿಮಿತ್ತ ಭೂಮಿಗೆ ಶಾಪ ಕೊಟ್ಟು ಮುಳ್ಳುಗಳನ್ನು ಬೆಳೆಸಿದ್ದನೋ ಅದೇ ಮನುಷ್ಯ ದೇವರಿಗೆ ಮುಳ್ಳಿನ ಕಿರೀಟ ಹಾಕಿದನು (ಆದಿಕಾಂಡ :3:18, ಯೋಹಾನ : 19:2)  

ನಮ್ಮ ಪಾಪ ಅಪರಾಧಗಳ ನಿಮಿತ್ತ ಹಿಂಸೆಯನ್ನು , ನಿಂದೆ ಅಪಮಾನಗಳನ್ನು, ಶಿಲುಬೆಯ ಮರಣವನ್ನು ಯೇಸು ನಮ್ಮ ಬದಲಾಗಿ ಅನುಭವಿಸಿದನು . ನಮ್ಮೆಲ್ಲರ ಪಾಪದ ಶಿಕ್ಷೆಯನ್ನು , ಶಾಪವನ್ನು ನಮಗಾಗಿ ತಾಳಿದನು (ಗಲಾತ್ಯ :3:14)


ದೇವಜನರೇ  ನಿಜವಾಗಿಯೂ ಯೇಸು ಬರಬ್ಬನ ಬದಲಾಗಿ ಮಾತ್ರವೇ ಶಿಲುಬೆಗೆ ಹಾಕಲ್ಪಟ್ಟನೆ ? ????

 

ಇಲ್ಲ .  ಆತನು ಲೋಕದ ಎಲ್ಲ ಜನರ ಬದಲಾಗಿ , ನಮ್ಮ ನಿಮ್ಮೆಲ್ಲರ  ಬದಲಾಗಿ ಶಿಲುಬೆಗೇರಿದನು . ಹೇಗಂದರೆ ನಾವೆಲ್ಲರೂ ಅಂದರೆ ಮನುಷ್ಯರೆಲ್ಲರೂ ಹುಟ್ಟಿದ ದಿನದಿಂದ ಪಾಪಿಗಳಾಗಿದ್ದೇವೆ . ಮನುಷ್ಯ ಪಾಪ ಮಾಡುವದರಿಂದ ಪಾಪಿಯಾಗುವುದಿಲ್ಲಪಾಪಿಯಾಗಿದ್ದದರಿಂದ ಪಾಪ ಮಾಡುತ್ತಾನೆ “.  ಹೌದು ಮನುಷ್ಯ ಸಾಮಾನ್ಯವಾಗಿ ಪಾಪ ಮಾಡಿದರೆ ನಾನು ಪಾಪಿ ಎಂದು ತಿಳಿಯಬಹುದು ಆದರೆ ಮನುಷ್ಯ ಹುಟ್ಟುವಾಗಲೇ ಪಾಪಿಯಾಗಿ ಜನಿಸುತ್ತಾನೆ(ಕೀರ್ತನೆ : 51:5), ಮತ್ತು ಇದರ ಫಲ ಮರಣ"ಯಾಕಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ"(.ರೋಮಾಪುರದವರಿಗೆ 6:23). ಮರಣ ಅಂದರೆ ನಿತ್ಯ ಕಾಲಕ್ಕೂದೇವರಿಂದ ದೂರವಾಗಿ  ನರಕದಲ್ಲಿ ಇರುವಂತದ್ದು , ನರಕದಲ್ಲಿ ಕಡಿಯುವ ಹುಳ ಸಾಯುವುದಿಲ್ಲ , ಸುಡುವ ಬೆಂಕಿ ಆರುವುದಿಲ್ಲ ಯುಗ ಯುಗಕ್ಕೂ ನೋವಿನಿಂದ ನರಳುವುದು ಪ್ರತಿಯೊಬ್ಬ ಪಾಪಿಯ ಅಂತ್ಯವಾಗಿದೆ (ಮಾರ್ಕ:9:48). ಆದರೆ ಅದರಿಂದ ರಕ್ಷಿಸಿಕೊಳ್ಳಲು ಒಂದೇ ಮಾರ್ಗ ಅದು ಯೇಸು ಮಾತ್ರವೇ . ಯಾಕಂದರೆ " ಯೇಸು ಪಾಪಿಗಳಾದ ಜನರನ್ನು ರಕ್ಷಿಸಿ ನರಕದಿಂದ ತಪ್ಪಿಸುವದಕ್ಕಾಗಿ ಪ್ರಪಂಚಕ್ಕೆ ಬಂದನು".(1 ತಿಮೊಥೆಯನಿಗೆ 1:15). 

ಲೋಕದಲ್ಲಿ ಅನೇಕ ಮಹಾತ್ಮರನ್ನು ನೋಡುತ್ತೇವೆ . ಅವರು ತಮ್ಮ ಜನರಿಗಾಗಿ , ಜನಾಂಗಕ್ಕಾಗಿ ,ದೇಶಕ್ಕಾಗಿ ,ರಾಜ್ಯಕ್ಕಾಗಿ ಪ್ರಾಣಕೊಟ್ಟವರಿದ್ದಾರೆ ಆದರೆ ಪಾಪಿಗಳಿಗಾಗಿಭಕ್ತಿಹೀನರಿಗಾಗಿಕೆಟ್ಟವರಿಗಾಗಿ, ಅನೀತಿವಂತವರಿಗಾಗಿ , ಅಶಕ್ತರಿಗಾಗಿ, ವೈರಿಗಳಿಗಾಗಿ ಪ್ರಾಣಕೊಟ್ಟವನು ಲೋಕದಲ್ಲಿ ಒಬ್ಬನೇ ಒಬ್ಬನು ಆತನೇ ಯೇಸುಕ್ರಿಸ್ತನು (ರೋಮಾ:5:6,8, 10, 1 ಪೇತ್ರ :3:18) . ಪ್ರಿಯ ಓದುಗರೇ ನಿಮ್ಮಲ್ಲಿ ಯಾರಾದರೂ ಪಾಪದ ಬಿಡುಗಡೆ ಮತ್ತು ಕ್ಷಮಾಪಣೆಯನ್ನು ಸ್ವರ್ಗದ ನಿತ್ಯಜೀವವನ್ನು ಬಯಸುವವದಾದರೆನಮಗಾಗಿ ಯಜ್ಞದ ಕುರಿಯಾಗಿ ನಮ್ಮ ಪಾಪ ಅಪರಾಧಗಳ ಬದಲಾಗಿ ಶ್ರಮೆ ಸಂಕಟಗಳನ್ನು ಶಿಲುಬೆಯ ಮೇಲೆ  ಅನುಭವಿಸಿ ತನ್ನ ಪ್ರಾಣ ಕೊಟ್ಟು ಸತ್ತು ಹೂಣಲ್ಪಟ್ಟು ಮೂರನೆಯ ದಿನ ಮರಣವನ್ನು ಜಯಿಸಿ ಎದ್ದು ಬಂದ ಯೇಸು ಕ್ರಿಸ್ತನು  ಇದ್ದಾನೆ . ನೀವು ಆತನ ಬಳಿ ಬಂದುಯೇಸುವೇ ನೀನೆ  ನನ್ನ ಒಡೆಯನು ನನ್ನ ಪಾಪವಿಮೋಚಕನು ಎಂದು ಹೇಳಿ ಮಾನಸಾಂತರ ಪಟ್ಟು ಪ್ರಾರ್ಥಿಸುವದಾದರೆ ಆತನು ನಿಮ್ಮನು ಕ್ಷಮಿಸಿ ತನ್ನ ಮಕ್ಕಳನ್ನಾಗಿ ಸ್ವೀಕರಿಸುವನು . ( ಯೋಹಾನ:1:12, 3:16).

 

ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣಮಾಡುತ್ತಾನೆ.(1 ಯೋಹಾನನು 2:2)

 

ಪ್ರಿಯರೇ ನಾವು ನಮ್ಮ ತಪ್ಪುಗಳನ್ನು ಒಪ್ಪಿಕೊಂಡು ಯೇಸುಕ್ರಿಸ್ತನ ಮುಂದೆ ಹೇಳಿದರೆ ಆತನು ಪ್ರೀತಿಸ್ವರೂಪನಾಗಿರುವದರಿಂದ ನಮ್ಮಎಲ್ಲ  ಪಾಪಗಳನ್ನು ಕ್ಷವಿುಸಿಬಿಟ್ಟು ಎಲ್ಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಪವಿತ್ರಗೊಳಿಸುವನು . (1 ಯೋಹಾನನು 1:9). 

 ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಶಿಲುಬೆಯನ್ನು ಏರಿದನು; ಆತನ ಬಾಸುಂಡೆಗಳಿಂದ ನಮಗೆ  ಗುಣವಾಯಿತು. (1 ಪೇತ್ರನು 2:24). ಹಾಗಾದರೆ ಪ್ರಿಯ ದೇವಜನರೇ ಯೇಸುಕ್ರಿಸ್ತನು ಸುಮಾರು 2000 ವರ್ಷಗಳ ಹಿಂದೆ  “ ಕೇವಲ ಬರಬ್ಬನ ಬದಲಾಗಿ ಮಾತ್ರವಲ್ಲದೆ ಇಡೀ ಮನುಷ್ಯ ಕುಲದ ಬದಲಾಗಿ ಮಾನವರ ಪಾಪ ಪರಿಹಾರಕ್ಕಾಗಿ ಮಹಾ ತ್ಯಾಗವನ್ನು ಮಾಡಿ ನಮ್ಮ ರಕ್ಷಕನಾಗಿದ್ದಾನೆ . ಇಂಥ ಪ್ರೀತಿಯುಳ್ಳ ರಕ್ಷಕನನ್ನು ಪಡೆದ ನಾವುಗಳು ಧನ್ಯರಲ್ಲವೇ !!!!!! 

 

 

ಎಲ್ಲರಿಗೂ "ಶುಭ ಶುಕ್ರವಾರದ (ಗುಡ್ ಫ್ರೈಡೆ)" ಶುಭಾಶಯಗಳು.

ಈ ಸಂದೇಶ ಓದಿದ ಪ್ರಿಯ ದೇವಜನರೆಲ್ಲರಿಗೂ ವಂದನೆಗಳು. ನಿಮ್ಮ ಸ್ನೇಹಿತರಿಗೂ ಈ ಸಂದೇಶವನ್ನು ಶೇರ್ ಮಾಡಿ........

                                                                     -    By Prabhu


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು