ಶಿಲುಬೆಯ ಏಳು ಮಾತುಗಳು/Jesus Seven Words on Cross(1)

 

"ಶಿಲುಬೆಯ ಏಳು ಮಾತುಗಳು"ನಮ್ಮ ರಕ್ಷಕನು, ಒಡೆಯನು ಆದ ಯೇಸುಕ್ರಿಸ್ತನ  ನಾಮದಲ್ಲಿ ಎಲ್ಲರಿಗೂ ವಂದನೆಗಳು.

     ಪ್ರಿಯ ದೇವಜನರನ್ನು “ ಶಿಲುಬೆಯ ಏಳು ಮಾತುಗಳು”  ಎಂಬ ಹೊಸ ಆತ್ಮಿಕ ಸಂದೇಶದಿಂದ ಕೆಲವು ಆತ್ಮೀಕ ಸತ್ಯ ಸಂಗತಿಗಳನ್ನು ತಿಳಿಯಪಡಿಸಲು ಪರಿಶುದ್ಧ ಆತ್ಮನ ಸಹಾಯದಿಂದ ಪ್ರಯತ್ನಿಸುತ್ತೇನೆ. ಪ್ರಿಯರೆ  ಶಿಲುಬೆಯ ಏಳು ಮಾತುಗಳು ಯಾರ ಮಾತುಗಳು ಎಂಬದಾಗಿ ನೋಡುವುದಾದರೆ  - ಅವು  ಸತ್ತವರನ್ನು ಎಬ್ಬಿಸಿದವನ ಮಾತುಗಳು , ಕುಷ್ಟ ರೋಗಿಗಳನ್ನು, ದೆವ್ವ ಹಿಡಿದವರನ್ನು , ಕಿವುಡರನ್ನು & ಕುರುಡರನ್ನು ಗುಣಪಡಿಸಿದವನ   ಮಾತುಗಳು . ಅವು ನಮ್ಮ ಪಾಪಗಳಿಗಾಗಿ ಶಾಪಗ್ರಸ್ತನಾಗಿ  ಪಾಪ ಸ್ವರೂಪಿಯಾಗಿ ನಮ್ಮ       ಪಾಪದ ಭಾರವನ್ನು , ಶಿಲುಬೆಯನ್ನು ಹೊತ್ತವನ, ಕೊರಡೆ  ಏಟುಗಳಿಂದ ಹೊಡಿಸಿಕೊಂಡವನ, ಮುಳ್ಳಿನ ಕಿರೀಟವನ್ನು ಧರಿಸಿಕೊಂಡವನ, ಕೈ ಕಾಲುಗಳಿಗೆ ಮೊಳೆಗಳಿಂದ ಜಡಿಯಲ್ಪಟ್ಟವನ ಹಾಗೂ ಎಲ್ಲಾ ಮನುಷ್ಯರಿಗಾಗಿ ತನ್ನ ಅಮೂಲ್ಯ ರಕ್ತವನ್ನು ಸುರಿಸಿ  ಭೂಮಿ ಆಕಾಶದ ಮಧ್ಯೆ ಶಿಲುಬೆಯ ಮೇಲೆ ನೇತಾಡುತ್ತಾ ಪಾಪದ ಶಾಪವನ್ನು ಶಿಕ್ಷೆಯನ್ನು ನಮಗಾಗಿ ಅನುಭವಿಸಿದ ನಮ್ಮ ಯೇಸುವಿನ ದಿವ್ಯ ಮಾತುಗಳೇ ಆ ಮಾತುಗಳು.       

              ಆ ಮಾತುಗಳು ಯಾವುಗಳೆಂದರೆ 

1.“ತಂದೆಯೇ, ಅವರಿಗೆ ಕ್ಷವಿುಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು” (ಲೂಕ  :  23:34). 

2.“ಈಹೊತ್ತೇ ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ” (ಲೂಕ : 23:43)

3. ಯೇಸು ತನ್ನ ತಾಯಿಗೆ – “ಅಮ್ಮಾ, ಇಗೋ ನಿನ್ನ ಮಗನು” ಎಂದು ಶಿಷ್ಯನಿಗೆ – “ಇಗೋ ನಿನ್ನ ತಾಯಿ”ಅಂದನು.(ಯೋಹಾನ :19: 26-27).

(ನಂತರ ಯೇಸು 3 ಗಂಟೆಗಳ ಕಾಲ ಸುಮ್ಮನಿದ್ದನು . ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ)

4.“ಏಲೀ, ಏಲೀ, ಲಮಾ ಸಬಕ್ತಾನೀ, ಅಂದರೆ ನನ್ನ ದೇವರೇ, ನನ್ನ ದೇವರೇ, ಯಾಕೆ  ನನ್ನನ್ನು ಕೈಬಿಟ್ಟಿದ್ದೀ” .(ಮತ್ತಾಯ : 27:  46)

5.“ನನಗೆ ನೀರಡಿಕೆ ಆಗಿದೆ” (ಯೋಹಾನ :19:28)                                                                                                        

6. “ತೀರಿತು” (ಯೋಹಾನ :19 :30)                                                                                                                              

7. “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ” (ಲೂಕ : 23:46)                   

ಈ ನಮ್ಮ ಕರ್ತನ ದಿವ್ಯ ಮಾತುಗಳನ್ನು ನಾವು ಒಂದೊಂದಾಗಿ ಅಭ್ಯಾಸ ಮಾಡುವುದಾದರೆ 

1. “ತಂದೆಯೇ, ಅವರಿಗೆ ಕ್ಷವಿುಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು” (ಲುಕ :  23:  34) 

ಯೇಸು ಕ್ರಿಸ್ತನು ಲೋಕದಲ್ಲಿ ಜೀವಿಸುವಾಗ ತನ್ನ ಸೇವೆಯ ಸಮಯದಲ್ಲಿ 

 ಕಪೆರ್ನೌವಿು ಎಂಬ ಊರಿನಲ್ಲಿ ಒಬ್ಬ ಪಾರ್ಶ್ವವಾಯುರೋಗಿಯ  ಪಾಪವನ್ನು(ಮಾರ್ಕ:2:1)ಫರಿಸಾಯನ  ಮನೆಯಲ್ಲಿ ಒಬ್ಬ ದುರಾಚಾರಿಯ  ಪಾಪವನ್ನು(ಲುಕ : 7:48)

ವ್ಯಭಿಚಾರದಲ್ಲಿ ವಿಚಾರದಲ್ಲಿ ಸಿಕ್ಕಿಬಿದ್ದ ಹೆಂಗಸಿನ  ಪಾಪವನ್ನು ಕ್ಷಮಿಸಿದನು (ಯೋಹಾನ: 8:11)ಪೇತ್ರನಿಗೆ ಏಳು ಸಾರಿ ಎಂದಲ್ಲ, ಏಳೆಪ್ಪತ್ತು ಸಾರಿ ನಿನ್ನ  ಸಹೋದರನನ್ನು  ಕ್ಷಮಿಸು (ಮತ್ತಾಯ 18:22)  ಎಂದು ಹಾಗೂ ಒಬ್ಬರನ್ನೊಬ್ಬರು ಕ್ಷಮಿಸಿರಿ ಎಂಬುದಾಗಿ ಹೇಳಿದನು.  ಕೊನೆಯದಾಗಿ ಆತನು ತನ್ನನ್ನು ಶಿಲುಬೆ ಮೇಲೆ ಹಿಂಸಿಸಿದ  ಸೈನಿಕರನ್ನು ಅಧಿಕಾರಿಗಳನ್ನು ಕಳ್ಳನನ್ನು  ಹಾಗೂ ಜನರನ್ನು ಕ್ಷಮಿಸಿದನು.  ಆತನು ತನ್ನನ್ನೇ  ಹಿಂಸೆ ಪಡಿಸಿದವರನ್ನು ಕ್ಷಮಿಸಿರುವಾಗ ಓದುಗರೆ ಇನ್ನೂ ಜನ್ಮದಿಂದ ಕರ್ಮದಿಂದ ಪಾಪಿಗಳಾದ ನಮ್ಮನ್ನು ಕೂಡ ನಾವು ಎಂಥವರಾಗಿದ್ದರೂ  ನಮ್ಮನ್ನು ಕ್ಷಮಿಸಿ ಶುದ್ದಿ ಮಾಡುವನು . ಯಾಕೆಂದರೆ ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡು ಪಶ್ಚಾತ್ತಾಪ  ಪಟ್ಟು ಯೇಸುವಿನಲ್ಲಿ ನಂಬಿಕೆ ಇಟ್ಟು  ಅರಿಕೆ ಮಾಡುವುದಾದರೆ ಆತನು ನೀತಿವಂತನು ನಂಬಿಗಸ್ತನು ಆಗಿರುವುದರಿಂದ ನಮ್ಮನ್ನು ಕ್ಷಮಿಸಿ ನಿತ್ಯ ನರಕದಿಂದ ಶಾಪದಿಂದ ಬಿಡಿಸಿ ನಮ್ಮನ್ನು ಶುದ್ಧಿ ಮಾಡುವನು. (1 ಯೋಹಾನ:1:9). 

ಓದುಗರೇ ನಿಮ್ಮ ಪಾಪಗಳು ಕ್ಷಮಿಸಲ್ಪಟ್ಟಿವೆಯೋ ? ಇಲ್ಲವಾದರೆ ಇವತ್ತೆ ನಿಮ್ಮ ಪಾಪಕ್ಕೆ ಪಶ್ಚತ್ತಾಪ ಪಟ್ಟು ಯೇಸುವಿನ ಮುಂದೆ ಮೊರೆಯಿಡುವುದಾದರೆ ಆತನು ನಿಮ್ಮನು ಕ್ಷಮಿಸಿ ರಕ್ಷಿಸುತ್ತಾನೆ . 


    2. “ಈಹೊತ್ತೇ ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ” ( ಲೂಕ  :  23:43 )       

    ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಇದ್ದಾಗ ಅಲ್ಲಿದ್ದ ಸೈನಿಕರು ಅಧಿಕಾರಿಗಳು ಹಾಗೂ ಜನರು      ಆತನನ್ನು ದೂಷಿಸುತ್ತಿದ್ದರು . ಜನರಾದರೊ “ ನೀನು ಕ್ರಿಸ್ತನಾಗಿದ್ದರೆ ಶಿಲುಬೆಯಿಂದ  ಇಳಿದು ಬಾ ಅನ್ನುತ್ತಿದ್ದರು. (ಮತ್ತಾಯ:27:39-44). ಆ ದೊಡ್ಡ ಗುಂಪಿನ ಹೀಯಾಳಿಕೆಯ  ಮಾತುಗಳನ್ನು ಯೇಸುವಿನ ಎಡಗಡೆ ಹಾಗೂ ಬಲಗಡೆ ಹಾಕಿದ್ದ ಕಳ್ಳರು ಸಹ ಕೇಳಿಸಿಕೊಳ್ಳುತ್ತಿದ್ದರು . ಅದರಲ್ಲಿ ಒಬ್ಬ ಕಳ್ಳನು ನಿನ್ನನ್ನು ನೀನು ರಕ್ಷಿಸಿಕೋ ನಮ್ಮನ್ನು ರಕ್ಷಿಸು ಎಂದು ಹೇಳಿದನು(ಲೂಕ :23:39-43).  ಈ ಕಳ್ಳನು ಬರಿ ಈ ಲೋಕದ ರಕ್ಷಣೆ , ದೇಹದ ರಕ್ಷಣೆ , ನೋವಿನಿಂದ ರಕ್ಷಣೆಯನ್ನು  ಯೇಸುವಿನಿಂದ  ಬಯಸಿದನು , ಆದರೆ ಇನ್ನೊಬ್ಬ  ಕಳ್ಳನು ಬರಿ ಜನರು ಆಡುವ ಮಾತುಗಳನ್ನು ಕೇಳಿ ಈತನು ನಿಜವಾಗಿಯೂ ಬರಬೇಕಾದ ಮೆಸ್ಸೀಯನು  ಎಂದು ಜನರ ಕೋಪದ ಮಾತುಗಳಿಂದಲೂ ಅರಿತನು(ಕೀರ್ತನೆ:76:10)  ಹಾಗೂ ಈ ಕಳ್ಳನು ನಿತ್ಯ ಜೀವನವನ್ನು ಬಯಸಿ ಯೇಸುವಿಗೆ “ ನನ್ನನ್ನು ನೆನೆಸಿಕೊ ಕರ್ತನೆ” ಅಂದನು.  ಪ್ರಿಯರೇ ಆತನು ಹೇಳಿದ ಮಾತಿಗೆ ಯೇಸು  ಕ್ರಿಸ್ತನು ಅದೇ ಕ್ಷಣ ಅವನಿಗೆ “ನೀನು ನನ್ನ ಸಂಗಡ ಪರದೈಸಿನಲ್ಲಿರುವಿ"  ಎಂದನು . ಆಲೋಚಿಸಿರಿ ನೀವು ಯಾವ ರಕ್ಷಣೆಯನ್ನು ಪದೇ ಪದೇ ಕರ್ತನಿಂದ ಬಯಸುತ್ತೀದ್ದೀರಿ  ರೋಗದಿಂದ ಕಷ್ಟದಿಂದ ಸಮಸ್ಯೆಯಿಂದ ರಕ್ಷಣೆಯೋ ? ಅಥವಾ ನಿತ್ಯ ನರಕದಿಂದ ರಕ್ಷಣೆಯೋ ? ಅಲೋಚಿಸಿರಿ . 

ಹಾಗೂ ನೀವು ಯಾವ ಗುಂಪಿನವರಾಗಿದ್ದೀರಿ ? ಮೊದಲನೇ ಕಳ್ಳನು ಜನರು  ಯೇಸುವನ್ನು ನಿಂದಿಸುವಾಗ ಅವನು ಅವರಂತೆಯೇ ನಿಂದಿಸಿ ಅವರ ಗುಂಪಿನವನಾದನು . ಜನರ ಚುಚ್ಚು ಮಾತುಗಳನ್ನು ಕೇಳಿ  ಅಪನಂಬಿಗಸ್ತನಾಗಿ ನಂಬಿಕೆ ಇಲ್ಲದೆ ಅವನು ಕೂಡ ಯೇಸು ಕ್ರಿಸ್ತನನ್ನು  ಪರೀಕ್ಷಿಸಿ  ಪ್ರಶ್ನಿಸಿದನು . ಮತ್ತು ಎರಡನೇ ಕಳ್ಳನಾದರೂ ತಾನು ಇನ್ನೇನು ಸ್ವಲ್ಪ ಸಮಯದಲ್ಲಿ ಸಾಯಲಿಕ್ಕಿರುವಾಗಲು ತಾನು ಒಬ್ಬನೇ ಕರ್ತನನ್ನು ಮಹಿಮೆ ಪಡಿಸಿ ಅಷ್ಟು ಜನ ಹಿಂಸಿಸುವವರ ಮಧ್ಯದಲ್ಲಿ ಯೇಸುವಿನ ಮಹತ್ಕಾರ್ಯಗಳನ್ನು ಕಣ್ಣಿನಿಂದ ನೋಡದಿದ್ದರೂ ಯೇಸುವಿನೊಂದಿಗೆ ಯಾವ ಸೇವೆಯಲ್ಲಿ ಇರದಿದ್ದರೂ ಆತನನ್ನು ನಂಬಿ ನಿತ್ಯ ಜೀವವನ್ನು ಹೊಂದಿದನು.  ಈ ಕಳ್ಳನು ಒಂದು ವೇಳೆ ಶಿಲುಬೆಯ ಮರಣದಿಂದ ಪಾರಾಗಿದ್ದರೆ ಯೇಸು ಕ್ರಿಸ್ತನ ಸುವಾರ್ತೆಯನ್ನು  ಪ್ರತಿಕ್ಷಣ ಸಾರುತ್ತಿದ್ದನೇನೋ ಆದರೆ ಆ ಅವಕಾಶ ಅವನಿಗೆ ಸಿಗಲಿಲ್ಲ . ಹಾಗಾದರೆ ನಮ್ಮ ನಿಮ್ಮ ಫಲವೇನು?  ನಾವು ರಕ್ಷಣೆ ಹೊಂದಿ ಎಷ್ಟೋ ವರ್ಷವಾದರೂ ಬೆರಳೆಣಿಕೆ ಜನರಿಗಾದರೂ ಸುವಾರ್ತೆ ಸಾರಿದ್ದೇವಾ ?  ನಮ್ಮ ಕರ್ತನ ಬಗ್ಗೆ ಹೇಳಿದ್ದೇವಾ?  ಆಲೋಚಿಸೋಣ .

3. “ಅಮ್ಮಾ, ಇಗೋ ನಿನ್ನ ಮಗನು”   . .........                                                                       

“ಇಗೋ ನಿನ್ನ ತಾಯಿ”......(ಯೋಹಾನ :19: 26-27) 

ಯೇಸುಕ್ರಿಸ್ತನು ಸೃಷ್ಟಿಗಿಂತ ಮೊದಲೇ ಇದ್ದವನು . ಮಾನವ ರೂಪ ಧರಿಸಿ ಜನ್ಮ ತಾಳಲು ಕಾರಣಳಾದ ಆತನ ಲೋಕದ ಶಾರೀರಿಕ ತಾಯಿ ಮರಿಯಳ ಬಗ್ಗೆಯೂ ಕೂಡ ಆತನು ಕಾಳಜಿ ವಹಿಸಿ ತನ್ನ ಪ್ರಿಯ ಶಿಷ್ಯನಿಗೆ ಅವಳನ್ನು ನೋಡಿಕೊಳ್ಳಲು ಹೇಳುತ್ತಿದ್ದಾನೆ . ಸಾಯುವಾಗಲು ಇನ್ನೊಬ್ಬರ ಬಗ್ಗೆ ಕಾಳಜಿ ಮಾಡುತ್ತಿದ್ದಾನೆ. ಎಂಥ ಪ್ರೀತಿ ಕ್ರಿಸ್ತನದು !!! ಎಂಥ ಭಕ್ತಿ ಮರಿಯಳದು !!!  ಪ್ರಿಯರೆ ಯೇಸುಕ್ರಿಸ್ತನು ಶಿಲುಬೆ ಮೇಲೆ ಸಾಯುವಾಗಲು ಆ ಶಿಲುಬೆಯ ಹತ್ತಿರ ಸ್ತ್ರೀಯರಿದ್ದರು ಆತನು ಪುನರುತ್ಥಾನವಾದಾಗಲೂ ಆತನ ಜೊತೆ ಸ್ತ್ರೀಯರಿದ್ದರು. ಸಹೋದರಿಯರೇ  ಈಗಿನ ಕಾಲದಲ್ಲಿ  ಸೇವಕರು , ವಿಶ್ವಾಸಿಗಳು ಹಿಂಸೆ ಪಡುವಾಗ ಭಕ್ತಯುಳ್ಳ  ಸಹೋದರಿಯರ ಪ್ರಾರ್ಥನೆಯಾದರೂ  ಅವರೊಂದಿಗೆ ಇದೆಯೇ  ? ಆಲೋಚಿಸಿರಿ.

4. “ಏಲೀ, ಏಲೀ, ಲಮಾ ಸಬಕ್ತಾನೀ, ಅಂದರೆ ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ” . (ಮತ್ತಾಯ : 27:  46)

 ಯೇಸು ಕ್ರಿಸ್ತನು ಅನೇಕ ಸಾರಿ "ನಾನು ನನ್ನ ತಂದೆಯು ಒಂದೇ ಆಗಿದ್ದೇವೆ ಎಂದು ಹೇಳುತ್ತಾನೆ(ಯೋಹಾನ:10:30) .  ಯಾಕಂದರೆ ತಂದೆಯಾದ ದೇವರು ಯೇಸುಕ್ರಿಸ್ತನು ಯಾವಾಗಲೂ ಒಂದೇ ಆಗಿದ್ದವರು.  ಯೇಸುಕ್ರಿಸ್ತನು ತಂದೆಯಾದ ದೇವರನ್ನು ಯಾವಾಗಲೂ ತಂದೆಯೇ ಎಂದು ಕರೆದಿದ್ದಾನೆ . ಆದರೆ ಈಗ ಆತನ ಸ್ವರ ಬದಲಾಗಿದೆ.  ಏಕೆಂದರೆ  ಯೇಸು  ಶಿಲುಬೆ ಮೇಲಿದ್ದಾಗ ಮಧ್ಯಾಹ್ನ 12 ಗಂಟೆಯಿಂದ 03 ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.  ಕಾರಣ ಸೃಷ್ಟಿಕರ್ತನಿಗೂ ಸೃಷ್ಟಿಗೂ ಘರ್ಷಣೆ ಉಂಟಾಯಿತು.  ಇಂಥ  ಗಳಿಗೆಯಲ್ಲಿ ದೇವರು ನಮ್ಮೆಲ್ಲರ ದೋಷ ಫಲವನ್ನು ಯೇಸುಕ್ರಿಸ್ತನ ಮೇಲೆ ಹಾಕಿದನು(ಯೆಶಾಯ :53:6). ಆತನನ್ನು ಜಜ್ಜುವುದು ದೇವರ ಸಂಕಲ್ಪವಾಗಿತ್ತು(ಯೆಶಾಯ :53:10). ನಮ್ಮ ಪಾಪಗಳನ್ನು ಕ್ರಿಸ್ತನಾದರೂ ತನ್ನ ಮೇಲೆ ಹೊತ್ತುಕೊಂಡು ನಮಗೆ ಬರಬೇಕಾದ ಪಾಪದ ಶಿಕ್ಷೆಯನ್ನು ಶಾಪವನ್ನು ತಾನು ಹೊತ್ತುಕೊಂಡನು . ಈ ಕಾರಣಗಳಿಂದ ದೇವರು ತನ್ನ ಪ್ರಿಯ ಮಗನಾದ  ಯೇಸುಕ್ರಿಸ್ತನ ಕೈಬಿಟ್ಟು ನರಕ ಪಾತ್ರರಾದ, ಪಾಪಿಗಳಾದ , ದೇವರನ್ನರಿಯದವರು, ಆತನಿಗೆ ವೈರಿಗಳು ಆದ  ನಮ್ಮನ್ನು ಕೈಹಿಡಿದು  ನಿತ್ಯ ನರಕದ ಬೆಂಕಿಯಿಂದ ತಪ್ಪಿಸಿದನು.  ಹೀಗೆ ಯೇಸು ಮನುಷ್ಯರ ಭೂತ  ವರ್ತಮಾನ ಭವಿಷ್ಯತ್ಕಾಲಗಳ ಪಾಪಗಳನ್ನು ಹೊತ್ತುಕೊಂಡಿದ್ದರ ಫಲವಾಗಿ ದೇವರಿಂದ ಕೈ ಬಿಡಲ್ಪಟ್ಟನು. 

5. “ನನಗೆ ನೀರಡಿಕೆ ಆಗಿದೆ” (ಯೋಹಾನ :19:28). 

ಯೇಸುಕ್ರಿಸ್ತನು ಶಿಲುಬೆಯ ಮೇಲೆ  ಸುಮಾರು ಆರು ತಾಸುಗಳ ಕಾಲ (ಬೆಳಿಗ್ಗೆ 9 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ, ಮಾರ್ಕ 15:25,  ಮತ್ತಾಯ :27:45ಗಾಯಗಳಿಂದ ದೇಹವೆಲ್ಲ ರಕ್ತಮಯವಾಗಿ ಬಿಸಿಲಿನ ಬೇಗೆಯಲ್ಲಿ ನೇತಾಡುತ್ತಿದ್ದನು . ಆತನ ಶರೀರದಿಂದ ರಕ್ತವೆಲ್ಲ ಹೊರಟು ಆತನಿಗೆ ನೀರಡಿಕೆ ಆಯಿತು. ಪ್ರಿಯರೆ ಯಾವ ದೇವರು  ಮನುಷ್ಯನಿಗಾಗಿ (ನೀರು)ಜಲರಾಶಿಯನ್ನು ಸೃಷ್ಟಿಸಿದನೋ( ಆದಿಕಾಂಡ :1:9-10) ಮತ್ತು ಅವರಿಗೆ ಜೀವಜಲ     ಬುಗ್ಗೆಯಾಗಿದ್ದಾನೋ (ಯೋಹಾನ: 4:10-14, ಜ್ಞಾನೋಕ್ತಿ:8:24)  ಅದೇ ದೇವರು  ನನಗಾಗಿ ನಿನಗಾಗಿ      ನೀರಡಿಕೆಯಿಂದ ಬಳಲಬೇಕಾಯಿತು.ಆದರೂ ಈ ನೀರಡಿಕೆ ಬರಿ ದೇಹದ ನೀರಡಿಕೆ ಆಗಿರಲಿಲ್ಲ. ಇನ್ನೂ ಅನೇಕ  ಜನರು ರಕ್ಷಣೆ ಹೊಂದಬೇಕೆಂಬ ಆತ್ಮೀಯ ನೀರಡಿಕೆ ಆಗಿತ್ತು. ಕ್ರಿಸ್ತನ     ಪ್ರೀತಿಯನ್ನು ಅರಿತು ರಕ್ಷಣಾನಂದವನ್ನು ಅನುಭವಿಸುತ್ತಿರುವ ದೇವಜನರೇ ವಿಶ್ವಾಸಿಗಳಾದ     ನಮಗೂ ಕೂಡ ಸುವಾರ್ತೆ ಸಾರಬೇಕೆಂಬ ದಾಹ ಇದೆಯೋ ? ನಿಜವಾದ ರಕ್ಷಣೆ ಹೊಂದದೆ ಇರುವ ನಮ್ಮ ಮನೆಯವರು,  ನೆರೆಹೊರೆಯವರು ಕೂಡ ನಿತ್ಯಜೀವವನ್ನು ಹೊಂದಬೇಕೆಂಬ ದಾಹ ಇದೆಯೋ ?  ಆಲೋಚಿಸೋಣ !!!!!!!!!!!!!!!!!!

6. “ತೀರಿತು” (ಯೋಹಾನ :19 :30)

ಯೇಸು ಕ್ರಿಸ್ತನು ಶಾಸ್ತ್ರದಲ್ಲಿ ಪ್ರವಾದಿಗಳಿಂದ ಮೊದಲೇ ಹೇಳಲ್ಪಟ್ಟ ಪ್ರಕಾರವೇ ತನ್ನನ್ನು  ಶಿಲುಬೆಗೆ ಒಪ್ಪಿಸಿಕೊಟ್ಟನು( 1 ಕೊರಿಂಥ :15:3-7) .  ಆತನು ತಂದೆಯಾದ ದೇವರು ನಿರ್ವಹಿಸಿದ ಎಲ್ಲ ಕೆಲಸವನ್ನು ಅಂದರೆ ರಕ್ಷಣಾ ಕಾರ್ಯವನ್ನು ಸಂಪೂರ್ಣವಾಗಿ ಮಾಡಿ ಮುಗಿಸಿದನು . ನಮ್ಮ ಪಾಪ ಅಪರಾಧಗಳ ದೆಸೆಯಿಂದ ಅನುಭವಿಸಬೇಕಾಗಿದ್ದ ಎಲ್ಲ ಶಿಕ್ಷೆಯನ್ನು ತನ್ನ ದೇಹದಲ್ಲಿ  ಅನುಭವಿಸಿದನು .ಅದಕ್ಕಾಗಿ ಆತನು ನಮ್ಮ ಪಾಪದ ಸಾಲವನ್ನು ಶಿಲುಬೆಯ ಮೇಲೆ ಸಂಪೂರ್ಣವಾಗಿ ತೀರಿಸಿದ್ದದರಿಂದ “ ತಿರೀತು” ಎಂದು ಹೇಳಿದನು. ಇನ್ನು ನಿತ್ಯಜೀವಕ್ಕಾಗಿ   ಮಾನವನು ಮಾಡಬೇಕಾದದ್ದು ಏನು ಇಲ್ಲ. ಯೇಸುವಿನ ಮೇಲೆ ನಂಬಿಕೆ ಇಟ್ಟು ಪಾಪಪರಿಹಾರ ಹೊಂದಿದವರಿಗೆ ಇನ್ನು ಯಾವ ನರಕದ ಭಯವಾಗಲಿ ಇಲ್ಲವೇ ಇಲ್ಲ . ಯಾಕೆಂದರೆ ಆತನಲ್ಲಿರುವವರಿಗೆ ಅಪರಾಧ ನಿರ್ಣಯವು ಇಲ್ಲವೆ ಇಲ್ಲ (ರೋಮ: 8:1). ಅವರೆಲ್ಲರೂ ಮರಣದಿಂದ ಪಾರಾಗಿ ಜೀವಕ್ಕೆ ಸೇರಿದವರಾಗಿದ್ದಾರೆ. (ಯೋಹಾನ:5:24).  ಹಾಗಾದರೆ ಪ್ರಿಯ ಓದುಗರೇ ನೀವು ನಿತ್ಯಜೀವಕ್ಕೆ ಬಾಧ್ಯರಾಗಿದ್ದೀರೋ ? 

7. “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ” (ಲೂಕ : 23:46) 

ಸಾಧಾರಣವಾಗಿ ನಾವು ನೋಡುವ ವ್ಯಕ್ತಿಯಾಗಿರಲಿ ಆತನಿಗೆ ಅಪಘಾತವಾದಾಗ ಬಹಳ ರಕ್ತವನ್ನು ಆತ ಕಳೆದುಕೊಂಡಾಗ ಅವನನ್ನು I.C.U  ನಲ್ಲಿ ಇಡುತ್ತಾರೆ . ಅಂತಹ ವ್ಯಕ್ತಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ  ಕಾರಣ ದೇಹದಲ್ಲಿರುವ ಬಹಳಷ್ಟು ರಕ್ತ ಕಡಿಮೆ ಆದಾಗ ಕ್ರಮೇಣ ಹೃದಯದ ಬಡಿತವು ಕಡಿಮೆಯಾಗುತ್ತದೆ . ಇದರಿಂದ ಹೃದಯದ ಕಾರ್ಯವು ನಿಲ್ಲುತ್ತಾ ಬಂದು ಮೆದುಳಿಗೆ ಸಾಕಷ್ಟು ರಕ್ತ ಪೂರೈಕೆ ಆಗದೇ ಇದ್ದಾಗ ಏನು ಮಾತಾಡಬೇಕೆಂಬುದು ಕೂಡ ತಿಳಿಯುವುದಿಲ್ಲ . ಶರೀರದ ಅಂಗಾಂಗಗಳು ಒಂದೊಂದಾಗಿ  ಸ್ವಾಧೀನ ಕಳೆದುಕೊಳ್ಳುತ್ತವೆ . ಆದರೆ ಪ್ರಿಯರೆ ನಮ್ಮ ಕರ್ತನಾದ ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಸಂಪೂರ್ಣ ರಕ್ತವನ್ನು ಸುರಿಸಿದ್ದರೂ , ತಲೆಯಲ್ಲಿ ಮುಳ್ಳಿನ ಕಿರೀಟವಿದ್ದರೂ ಆತನು ಸ್ಪಷ್ಟವಾಗಿ ಮಾತಾಡುತ್ತಿದ್ದಾನೆ . ಏಕೆಂದರೆ ಯೇಸುವಿಗೆ ತನ್ನ ದೇಹದ ಮೇಲೆ ಸಂಪೂರ್ಣ ನಿಯಂತ್ರಣವಿದೆ. ಆತನು ಜೀವರಾಶಿಯನ್ನು ಸೃಷ್ಟಿಸಿದವನು. ಆತನ ಪ್ರಾಣವನ್ನು ಯಾರು ತಕ್ಕೊಳ್ಳಲಿಲ್ಲ ಆತನೇ ತನ್ನಷ್ಟಕ್ಕೆ ತಾನೇ ನಮ್ಮೆಲ್ಲರಿಗಾಗಿ ತನ್ನ ಪ್ರಾಣವನ್ನು ಕೊಟ್ಟನು(ಯೋಹಾನ:10:18).  ಈ ಕಾರಣದಿಂದಲೇ ಯೇಸು ಎಲ್ಲ ಕಾರ್ಯಗಳನ್ನು ಮುಗಿಸಿದ ನಂತರವೇ “ತೀರಿತು” ಎಂದು ಹೇಳಿ ತನ್ನ ಆತ್ಮವನ್ನು ತಂದೆಯಾದ ದೇವರಿಗೆ ಒಪ್ಪಿಸಿ ಕೊಟ್ಟನು. ಯೇಸುಕ್ರಿಸ್ತನಿಗೆ ತನ್ನ ಪ್ರಾಣವನ್ನು ಕೊಟ್ಟು ಅದನ್ನು ತಿರುಗಿ ಪಡೆದುಕೊಳ್ಳುವ ಅಧಿಕಾರ ಇದ್ದದರಿಂದಲೇ ಆತನು ಮೂರನೇ ದಿನ ಮರಣವನ್ನು ಜಯಿಸಿ ಮೃತ್ಯುಂಜಯನಾಗಿ ಎದ್ದು ಬಂದನು. ಆತನೇ ಜೀವವು ಪುನರುತ್ಥಾನವು ಆಗಿದ್ದಾನೆ ಆತನನನ್ನು ನಂಬುವ ಪ್ರತಿಯೊಬ್ಬನು ಆತನಂತೆಯೇ ಸ್ವರ್ಗದಲ್ಲಿ ಸದಾಕಾಲಕ್ಕೂ ಜೀವಿಸುವವನಾಗಿದ್ದಾನೆ. 

  ಯೇಸುಕ್ರಿಸ್ತನು ಈ ಸಂದೇಶವನ್ನು ಓದಿದ ಪ್ರತಿಯೊಬ್ಬರನ್ನು ಆಶೀರ್ವದಿಸಲಿ. 

                            By Bro- Prabhu

ಈ ಸಂದೇಶ ಓದಿದ ಪ್ರಿಯ ದೇವಜನರೆಲ್ಲರಿಗೂ ವಂದನೆಗಳು. ನಿಮ್ಮ ಸ್ನೇಹಿತರಿಗೂ ಈ ಸಂದೇಶವನ್ನು ಶೇರ್ ಮಾಡಿ........


2 Comments

Post a Comment
Previous Post Next Post