ತಾಮ್ರದ ಸರ್ಪ
ನಮ್ಮನ್ನು ತನ್ನ ರಕ್ತದಿಂದ ಕ್ರಯಕ್ಕೆ ಕೊಂಡುಕೊಂಡ ಯೇಸು ಕ್ರಿಸ್ತನ ನಾಮದಲ್ಲಿ ಎಲ್ಲರಿಗೂ ವಂದನೆಗಳು .
ಪ್ರಿಯ ದೇವಜನರೇ ಪರಿಶುದ್ಧಾತ್ಮನ ಸಹಾಯದಿಂದ ಈ ಸಂದೇಶದಲ್ಲಿ ತಾಮ್ರದ ಸರ್ಪ ವಿಷಯದಲ್ಲಿ ಸಂದೇಶ ಬರೆಯಲು ಪ್ರೇರೇಪಣೆ ಉಳ್ಳವನಾಗಿದ್ದೇನೆ .
👉 ಹಿನ್ನೆಲೆ :
ಇಸ್ರಾಯೇಲ್ಯರನ್ನು ಮೋಶೆಯು ಐಗುಪ್ಯದಿಂದ ಕರೆದುಕೊಡು ಬರುವಾಗ ಮಾರ್ಗದುದ್ದಕ್ಕೂ ಅದ್ಬುತ ರೀತಿಯಲ್ಲಿ ಅವರನ್ನು ನಡೆಸಿದನು. ಆದರೂ ಅವರು ಪ್ರಯಾಣ ಮಾಡುವಾಗ ಮೋಶೆಗೂ ದೇವರಿಗೂ ಗುಣುಗುಟ್ಟುತ್ತಲೇ ಇದ್ದರು . ಇದರ ಪರಿಣಾಮ ದೇವರು ಕೋಪಗೊಂಡು ಅವರ ಮದ್ಯದಲ್ಲಿ ಬೆಂಕಿಯನ್ನುಂಟು ಮಾಡಿದ್ದರಿಂದ ಅವರು ಇಳುಕೊಂಡಿದ್ದ ಪಾಳೆಯದ ಕಡೇ ಭಾಗದವರು ಸುಟ್ಟು ಹೋದರು . ಆಗ ಅಲ್ಲಿಯ ಜನರು ಮೋಶೆಯ ಬಳಿಗೆ ಬಂದು ಮೊರೆಯಿಡಲು ಮೋಶೆಯು ಅವರಿಗಾಗಿ ಪ್ರಾರ್ಥಿಸಲು ಬೆಂಕಿ ಆರಿ ಹೋಯಿತು. (ಅರಣ್ಯಕಾಂಡ :11:01-03)
ಇದೆ ಇಸ್ರಾಯೇಲ್ಯರು ಅರಣ್ಯಕಾಂಡ 21 ನೆ ಅಧ್ಯಾಯದಲ್ಲಿ ಹೋರ್ ಬೆಟ್ಟವನ್ನು ಇಳಿದು ಅವರಿಗೆ ವಿರುದ್ಧವಾಗಿ ಬಂದ ಅರಾದಿನ ಅರಸನನ್ನು ಸೋಲಿಸಿ ಅವರ ಜನರನ್ನು ಅವರ ಗ್ರಾಮಗಳನ್ನು ನಿಶ್ಯೇಷವಾಗಿ ನಾಶಮಾಡಿಬಿಟ್ಟರು. (ಅರಣ್ಯಕಾಂಡ :21:01-03 ) . ಈ ಸಮಯದಲ್ಲಿಯೂ ಕೂಡ ಇಸ್ರಾಯೇಲ್ಯರು ಮತ್ತೆ ಬೇಸರವಾಗಿ ಅಪನಂಬಿಕೆಯಿಂದ ದೇವರಿಗೂ ಮೋಶೆಗೂ ವಿರೋಧವಾಗಿ ಮಾತಾಡುತ್ತಾ , ನೀವು ನಮ್ಮನ್ನು ಈ ಮರಳುಕಾಡಿನಲ್ಲಿ ಕೊಲ್ಲಬೇಕೆಂದು ಐಗುಪ್ತ ದೇಶದಿಂದ ಕರೆದುಕೊಡು ಬಂದಿರೋ ? ಇಲ್ಲಿ ಆಹಾರವು ಇಲ್ಲ ,ನೀರು ಇಲ್ಲ. ಎಂದು ಮಾತಾಡತೊಡಗಿದರು .
ಪ್ರಿಯರೆ, ದೇವರು ಇಸ್ರಾಯೇಲ್ಯರಿಗೆ ಪರಲೋಕದ ಮನ್ನವನ್ನು ಊಟಕ್ಕೆ ಕೊಟ್ಟು, ಕುಡಿಯುವುದಕ್ಕೆ ಬಂಡೆಯೊಳಗಿಂದ ನೀರನ್ನು ಕೊಟ್ಟು ಅವರನ್ನು ಪೋಷಿಸುತ್ತಾ ಸಂರಕ್ಷಿಸುತ್ತಾ ಮೇಘಸ್ತಂಭವೂ ಅಗ್ನಿಸ್ತಂಭವೂ ಆಗಿ ಕಾಪಾಡುತ್ತಾ ಬಂದರೂ ಅವರು ದೇವರನ್ನು ಆತನ ಉಪಕಾರವನ್ನು ಮರೆತು ಅಪನಂಬಿಕೆಯಿಂದ ಗುಣಗುಟ್ಟುವವರಾದರು . ಅನೇಕ ಸಾರಿ ಕ್ರೈಸ್ತ ವಿಶ್ವಾಸಿಗಳಾದ ನಾವು ಕೂಡ ಕರ್ತನು ನಮ್ಮನ್ನು ಈ ದಿನದವರೆಗೂ ಪೋಷಿಸಿ ಕಾಪಾಡಿದ್ದನ್ನು ಮರೆಯುತ್ತೇವೆ. ಇತ್ತೀಚಿಗೆ ಕೊರೊನ ದಿನಗಳಲ್ಲಂತು ಸಭೆಗಳು ಸರ್ಕಾರದ ನಿಯಮದಂತೆ ಮುಚ್ಚಲ್ಪಟ್ಟಾಗ ಸಭೆಗಳಲ್ಲಿ ಯಾವ ವಾಕ್ಯ ಬೋಧನೆಗಳು ಇಲ್ಲದೆ ನಾವೆಲ್ಲರೂ ಆತ್ಮೀಕವಾಗಿ ಕುಗ್ಗಿಹೋದೆವು . ಆ ದಿನಗಳ ಪರಿಣಾಮ ಅನೇಕರು ಸಭೆಗೆ ಬರುವುದನ್ನು ಕೂಡ ಬಿಟ್ಟರು. ಈ ಸಂದೇಶ ಓದುತ್ತಿರುವ ನನ್ನ ಪ್ರಿಯ ದೇವಜನರೇ ಆದರೂ ನಾವು ಈ ದಿನ ಬದುಕಿ ಉಳಿದಿದ್ದೇವೆ ಕಾರಣ ಕರ್ತನಾದ ಯೇಸುವಿನ ಕೃಪೆ ನಮ್ಮೆಲ್ಲರ ಮೇಲೆ ಇರುವುದರಿಂದಲೆ . ಹಾಗಾದರೆ ನಾವು ಇಸ್ರಾಯೇಲ್ಯರ ಹಾಗೆ ಗುಣುಗುಟ್ಟದೆ ಇರೋಣ .
👉 ಪರಿಣಾಮ :
ಈ ಇಸ್ರಾಯೇಲ್ಯರು ದೇವರ ವಿರುದ್ಧ ಮಾತಾಡಿದ್ದಕ್ಕಾಗಿ ದೇವರು ಸರ್ಪಗಳನ್ನು(ಉರಿಮಂಡಲ- ಮರಳಿನಲ್ಲಿ ಇರುವ ಸರ್ಪಗಳ ಕಡಿತ ಉರಿಯುವುದು) ಅವರ ಬಳಿ ಕಳುಹಿಸಿದನು . ಅವು ಜನರನ್ನು ಕಚ್ಚಿದ್ದರಿಂದ ಅನೇಕರು ಸತ್ತರು ಮತ್ತು ಸಾಯುತ್ತಲಿದ್ದರು . ಆಗ ಜನರು ಮೋಶೆಯ ಬಳಿ ಬಂದು ದೇವರಿಗೆ ಪ್ರಾರ್ಥಿಸಬೇಕೆಂದು ಕೇಳಿದಾಗ ದೇವರು ಮೋಶೆಗೆ ವಿಷಸರ್ಪದ ಆಕಾರವನ್ನು ತಾಮ್ರದಿಂದ ಮಾಡಿ ಧ್ವಜಸ್ತಂಭದ ಮೇಲೆ ಎತ್ತರದಲ್ಲಿ ಇಡಲು ಹೇಳಿದನು. ಯಾರು ಸರ್ಪಗಳಿಂದ ಕಚ್ಚಿಸಿಕೊಂಡು ಗಾಯಪಟ್ಟಿರುತ್ತಾರೊ ಅವರು ಎತ್ತರದಲ್ಲಿ ಇಡಲ್ಪಟ್ಟ ಆ ತಾಮ್ರದ ಸರ್ಪವನ್ನು ನೋಡಿ ಬದುಕಿಕೊಳ್ಳುವರು ಎಂದನು. ಹಾಗೆಯೆ ಮೋಶೆ ಮಾಡಿದಾಗ ಸರ್ಪಗಳಿಂದ ಕಚ್ಚಲ್ಪಟ್ಟ ಜನರಲ್ಲಿ ಯಾರು ಆ ತಾಮ್ರದ ಸರ್ಪವನ್ನು ಲಕ್ಷವಿಟ್ಟು ನೋಡಿದರೋ ಅವರೆಲ್ಲರೂ ಜೀವ ಉಳಿಸಿಕೊಂಡರು. ( ಅರಣ್ಯಕಾಂಡ :21:4-9)
👉 ಪರಿಹಾರ :
ಪ್ರಿಯರೆ ಜನರು ಉಳಿಯುವದಕ್ಕಾಗಿ ಅಲ್ಲಿ ದೇವರು ಯಾವ ಔಷಧಿಯನ್ನು, ಯಾವುದೇ ಗಿಡಮೂಲಿಕೆಯನ್ನು ಕೊಡಲಿಲ್ಲ. ಆ ಇಸ್ರಾಯೇಲ್ಯರು ತಮ್ಮ ಪ್ರಾಣ ಉಳಿಯುದಕ್ಕೆ ಯಾವ ದೊಡ್ಡ ಕಾರ್ಯಮಾಡಬೇಕಾಗಿರಲಿಲ್ಲ . ತಲೆಯೆತ್ತಿ ನಂಬಿಕೆಯಿಂದ ಸರ್ಪದ ಆಕಾರವನ್ನು ನಂಬಿಕೆಯಿಂದ ನೋಡುವುದು ಮಾತ್ರವೆ . ಅಲ್ಲಿ ಸಾಯುತ್ತಿರುವವರಲ್ಲಿ “ಇದೇನು ಮೋಶೆ ಬರಿ ನೋಡಲು ಹೇಳುತ್ತಿದ್ದಾನೆ !! ಬರಿ ನೋಡಿದರೆ ಬದುಕುತ್ತೇನೋ” ಎಂದು ಪ್ರಶ್ನಿಸಿರಬಹುದು ಆದರೂ ನೋಡಿದವರೆಲ್ಲರೂ ಉಳಿದರು , ಕೆಲವರು ಇದೇನು ಎಷ್ಟು ಸುಲಭದ ಕೆಲಸ ಅಂದು ನೋಡಿದವರು ಕೂಡ ಉಳಿದರು . ಆದರೆ ಯಾವ ವ್ಯಕ್ತಿ ಸರ್ಪದಿಂದ ಕಚ್ಚಲ್ಪಟ್ಟಿದ್ದನೋ ಅವನೇ ತನಗಾಗಿ ಆ ಸರ್ಪದ ಆಕಾರವನ್ನು ನೋಡಬೇಕಾಗಿತ್ತು . ಗಾಯ ಹೊಂದಿದ ವ್ಯಕ್ತಿಗೆ ಬದಲಾಗಿ ಬೇರೆ ಯಾರೇ ನೋಡಿದರೂ ಆ ವ್ಯಕ್ತಿ ಉಳಿಯುತ್ತಿರಲಿಲ್ಲ . ಯಾಕೆ ದೇವರು ಜನರ ಸಾವಿಗೆ ಕಾರಣವಾದ ಸರ್ಪದ ಮೂರ್ತಿಯನ್ನೇ ಎತ್ತರದಲ್ಲಿಡಲು ಹೇಳಿದನು . ಯಾಕೆಂದರೆ ಅವರು ಮಾಡಿದ ಪಾಪದ ದೆಸೆಯಿಂದ ಅವರಿಗೆ ಅಂತಹ ಮರಣ ಉಂಟಾಗಿತ್ತು .
ಮನುಷ್ಯನು ಕೂಡ ಪಾಪವೆಂಬ ಸರ್ಪದಿಂದ ಕಚ್ಚಲ್ಪಟ್ಟು ಒಂದು ದಿನ ಸತ್ತು ನ್ಯಾಯತೀರ್ಪನ್ನು ಎದುರಿಸುವವನಿದ್ದಾನೆ (ಇಬ್ರಿಯ:9:27), ನಾವು ಕೂಡ ಜನ್ಮದಿಂದ ಪಾಪವೆಂಬ ಸರ್ಪದಿಂದ ಕಚ್ಚಲ್ಪಟ್ಟಿದ್ದೇವೆ. ಆದರೆ ಯೇಸು ನಮಗಾಗಿ ಪಾಪಸ್ವರೂಪನಾಗಿ ಶಿಲುಬೆಯ ಮೇಲೆ ನೇತುಹಾಕಲ್ಪಟ್ಟನು(2 ಕೊರಿಂಥ :5:21,ಯೋಹಾನ : 03:14) . ಇಸ್ರಾಯೇಲ್ಯರು ಉಳಿಯಲು ಎತ್ತರದಲ್ಲಿದ್ದ ತಾಮ್ರದ ಸರ್ಪವನ್ನು ನೋಡುವುದು ಅವಶ್ಯವಾಗಿತ್ತು , ಆದಿಯಲ್ಲಿ ಪಾಪ ಮತ್ತು ಮರಣ ಮನುಷ್ಯನಿಗೆ ಬಂದಿದ್ದು ಮನುಷ್ಯನ ನೋಟದಿಂದಲೇ (ಆದಿ :3:6). ಹಾಗೆಯೆ ಮನುಷ್ಯನಿಗೆ ಪಾಪ ಮತ್ತು ಮರಣದಿಂದ ಬಿಡುಗಡೆಯು ಕೂಡ ಅವನ ನೋಟದಿಂದಲೇ (ಯೆಶಾಯ : 45:22). ಆದ್ದರಿಂದ ನಾವು ಕೂಡ ನಮಗಾಗಿ ಶಿಲುಬೆಗೆ ಹಾಕಲ್ಪಟ್ಟ ಕ್ರಿಸ್ತನನ್ನು ನೋಡುವುದು ಅವಶ್ಯವಾಗಿದೆ , ಯಾರು ಶಿಲುಬೆಯ ಮೇಲಿರುವ ಯೇಸು ಕ್ರಿಸ್ತನನ್ನು ನಂಬಿಕೆಯಿಂದ ನೋಡಿ ವಿಶ್ವಾಸವಿಡುತ್ತಾರೋ ಅವರು ರಕ್ಷಿಸಲ್ಪಟ್ಟು ನಿತ್ಯಜೀವವನ್ನು ಹೊಂದುತ್ತಾರೆ .
ಪ್ರಿಯರೆ ಆ ಇಸ್ರಾಯೇಲ್ಯರಾದರೋ ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಲಕ್ಷವಿಟ್ಟು ನೋಡಿ ಶಾರೀರಿಕ ಮರಣದಿಂದ ಪಾರಾದರು , ಆದರೆ ಪಾಪಿಗಳಿಗಾಗಿ ಶಿಲುಬೆಗೆ ಹಾಕಲ್ಪಟ್ಟ ಯೇಸುಕ್ರಿಸ್ತನನ್ನು ಲಕ್ಷವಿಟ್ಟು ನೋಡುವವರು ಶಾಶ್ವತ ಮರಣದಿಂದ ಪಾರಾಗುತ್ತಾರೆ. 👉 ಕ್ರಿಸ್ತೀಯ ಮೂಢನಂಬಿಕೆ :
ಆದರೂ ಸೈತಾನನು ಮನುಷ್ಯರನ್ನು ಹೇಗೆ ಮೂರ್ಖರನ್ನಾಗಿ ಮಾಡುತ್ತಾನೆಂದರೆ ಬಹಳ ವರ್ಷದ ನಂತರ ಆ ಮೋಶೆ ಮಾಡಿದ ಆ ತಾಮ್ರದ ಸರ್ಪವನ್ನು ಅವರು ಆ ಸಮಯದಲ್ಲಿ ಮಾತ್ರ ಉಪಯೋಗಿಸದೆ ಅದನ್ನು ಪೂಜಿಸುತ್ತಾ “ನೆಹುಷ್ಟಾನ್” ಎಂದು ಹೆಸರಿಟ್ಟು ಧೂಪ ಹಾಕುತ್ತಾ ಇರುತ್ತಾರೆ (2 ಅರಸು:18:4). ದೇವರು “ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂವಿುಯಲ್ಲಾಗಲಿ ಭೂವಿುಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು.
ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜೆಮಾಡಲೂ ಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸುವುದಿಲ್ಲ ” ಎಂದು ಹೇಳಿದ್ದರೂ ಅವರು ಅದನ್ನು ಮರೆತರು (ವಿಮೋ :20:4-5). ಪ್ರಿಯರೆ
ಅವರನ್ನು ಉಳಿಸಿದ್ದು ಆ ಮೂರ್ತಿಯಲ್ಲ ಆದರೆ ಸೈತಾನನು ಅವರನ್ನು ಪ್ರೇರೇಪಿಸಿದನು , ಈಗಿನ ದಿನಗಳಲ್ಲಿಯೂ ಕೂಡ ವಿಶ್ವಾಸಿಗಳು ಪ್ರಾರ್ಥಿಸಿದ ಎಣ್ಣೆ, ನೀರು, ಮನುಷ್ಯ ಇತ್ಯಾದಿಗಳನ್ನು ವಿಗ್ರಹದ ರೂಪದಲ್ಲಿ ಅವುಗಳ ಮೇಲೆ ನಂಬಿಕೆಯಿಟ್ಟು ಆತ್ಮಸ್ವರೂಪನಾದ ಕರ್ತನನ್ನು ಮರೆಯುತ್ತಾರೆ .
ಅಂದರೆ ದೇವರು ತನ್ನ ಮಕ್ಕಳ ಒಳಿತಿಗಾಗಿ ಉಪಯೋಗಿಸಿದ ವಸ್ತುಗಳನ್ನೂ, ಮನುಷ್ಯರನ್ನು ಸೈತಾನನು ಜನರ ಮತ್ತು ವಿಶ್ವಾಸಿಗಳ ಹೃದಯದಲ್ಲಿ ವಿಗ್ರಹಗಳನ್ನಾಗಿ ರೂಪಿಸಿ ದೇವರ ಮಹಿಮೆಯನ್ನು ಬೇರೆಯವರಿಗೆ ಕೊಡುವ ಹಾಗೆ ಮಾಡುತ್ತಾನೆ . ಈಗಿನ ದಿನಗಳಲ್ಲಿ ಅನೇಕ ಸೇವಕರು ತಮಗೆ ಕರ್ತನು ಕೊಟ್ಟ ವರಗಳಿಂದ ಅದ್ಭುತಗಳನ್ನು ಮಾಡಿ ಜನರ ಮತ್ತು ವಿಶ್ವಾಸಿಗಳ ಮುಂದೆ “ಈ ಅದ್ಭುತ, ಚಮತ್ಕಾರ , ಸ್ವಸ್ತತೆಗಳನ್ನು ನಾನು ಮಾಡಿದ್ದು “ ಎಂದು ಹೇಳಿ ಕರ್ತನ ಮಹಿಮೆಯನ್ನು ಕಸಿದುಕೊಳ್ಳುವವರಾಗಿದ್ದಾರೆ . ಹೀಗೆ ಎಲ್ಲರನ್ನುಮರಳು ಮಾಡುವುದು ಸೈತಾನನಿಗೆ ಸುಲಭವೂ ಕೂಡ ಆಗಿದೆ . "ಯಾವುದನ್ನು ನಾವು ದೇವರಿಗಿಂತ ಹೆಚ್ಚಾಗಿ ಪ್ರೀತಿಸುತ್ತೇವೋ ಅದು ವಿಗ್ರಹವೇ ಆಗಿದೆ ". ಆದರೆ ಸತ್ಯದೇವರನ್ನು ಅರಿತ ನಾವುಗಳು ಹಾಗೆ ಮಾಡದೆ ವಾಕ್ಯದ ಗೂಢಾರ್ಥಗಳನ್ನು ಅರಿತು ಆತ್ಮೀಕವಾಗಿ ಬೆಳೆದು ಬೇರೆಯವರನ್ನು ಬಲಪಡಿಸುವುದು ಅನಿವಾರ್ಯವಾಗಿದೆ .
ಇನ್ನು ಹೆಚ್ಚಿನ ಆತ್ಮೀಯ ಸತ್ಯಗಳನ್ನು ದೇವರು ತನ್ನ ಪವಿತ್ರಾತ್ಮನ ಸಹಾಯದಿಂದ ನಿಮಗೆ ತಿಳಿಯಪಡಿಸಲಿ .
0 ಕಾಮೆಂಟ್‌ಗಳು